ಮಂಗಳೂರು (ದಕ್ಷಿಣ ಕನ್ನಡ) : ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಬಕ ಸಮೀಪದ ಮುರ ಜಂಕ್ಷನ್ ನಲ್ಲಿ ನಡೆದಿದೆ.
ಈಶ್ವರ ಎಂಬುವವರ ಮನೆಯಲ್ಲಿ ಇಂದು ಕಾರ್ಯಕ್ರಮವಿದ್ದು, ಅದಕ್ಕಾಗಿ ಅವರ ಮಗಳು ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ಅವರನ್ನು ಪುತ್ತೂರು ಪೇಟೆಯಿಂದ ಈಶ್ವರ್ ರವರು ತನ್ನ ವ್ಯಾಗನರ್ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮುರ ಜಂಕ್ಷನ್ ಬಳಿ ಪಡ್ನೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ಸು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನಜ್ಜುಗುಜ್ಜಾಗಿದೆ. ಕಾರಿನೊಳಗಡೆ ಸಿಲುಕಿದ್ದ ಮೂವರೂ ಗಾಯಗೊಂಡಿದ್ದರು.
ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.