ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಎಲ್ಲರ ಸಹಕಾರದೊಂದಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ದಿನ ಆಚರಣೆಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಚಾಮರಾಜನಗರ ಜಿಲ್ಲೆ ಹಲವಾರು ಕ್ಷೇತ್ರಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಚಾಮರಾಜನಗರವು ಜಿಲ್ಲೆಯಾಗಿ 25 ವರ್ಷ ಪೂರ್ಣಗೊಳಿಸಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನ ಆಚರಣೆ ಸಂದರ್ಭದಲ್ಲಿ ಜಿಲ್ಲೆಯ ಸಂಸ್ಥಾಪನಾ ದಿನವನ್ನೂ ಆಚರಿಸಬೇಕು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಪಡೆದು ಗೌರವಿಸಬೇಕು. ಶಾಲಾ ಕಾಲೇಜುಗಳಲ್ಲಿ, ಬ್ಯಾಂಕುಗಳಲ್ಲಿಯೂ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನ ಆಚರಿಸಬೇಕು. ರಾಷ್ಟ್ರ ನಾಯಕರ ಭಾವಚಿತ್ರ ಇಡಬೇಕು. ಬ್ಯಾಂಕುಗಳು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸುವಲ್ಲಿ ನಿರ್ಲಕ್ಷ್ಯ ತೋರದಿರಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಇದಕ್ಕೂ ಮೊದಲು ನಡೆಸಲಾಗುವ ತಾಲೀಮು ಸಂದರ್ಭದಲ್ಲಿಯೂ ಜವಾಬ್ದಾರಿಯುತವಾಗಿ ಕರೆತಂದು ಕಳುಹಿಸಿಕೊಡಬೇಕು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೆರಳಿನ ಹಾಗೂ ಆಸನದ ವ್ಯವಸ್ಥೆ ಸಮರ್ಪಕವಾಗಿರಬೇಕು. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮಾಡಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು ಮುಖಂಡರು ನೀಡಿದರು.ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಮಾತನಾಡಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನ ಆಚರಣೆಗೆ ಎಲ್ಲಾ ಅಗತ್ಯ ಸಿದ್ದತೆ ಮಾಡಲಾಗುವುದು. ಕಾರ್ಯಕ್ರಮ ಸುಗಮ ನಿರ್ವಹಣೆಗೆ 9 ಸಮಿತಿಗಳನ್ನು ನೇಮಕ ಮಾಡಿದ್ದು ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದರು.ಸ್ವಾತಂತ್ರ್ಯ ದಿನ ಆಚರಣೆ ಸಂಬಂಧ ಸಂಘಟನೆಗಳ ಮುಖಂಡರು ನೀಡಿರುವ ಅಭಿಪ್ರಾಯ ಸಲಹೆಗಳು ಮುಖ್ಯವಾಗಿವೆ. ದೇಶಭಕ್ತಿ ಕುರಿತು ಶಾಲಾ ಮಕ್ಕಳಿಂದ ಬೆಳಗಿನ ಹಾಗೂ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮ, ಪಥಸಂಚಲನ ಸೇರಿದಂತೆ ಇತರೆ ಏರ್ಪಾಡು ಮಾಡಲಾಗುವುದು. ಕ್ರೀಡಾಂಗಣದಲ್ಲಿ ನೆರಳು, ಆಸನಗಳ ವ್ಯವಸ್ಥೆ ಸೇರಿದಂತೆ ಪೂರಕವಾಗಿರುವ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸ್ವಾತಂತ್ರ್ಯ ದಿನ ಆಚರಣೆಯಲ್ಲಿ ನಿರ್ಲಕ್ಷ್ಯ ತೋರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಪಡೆಯಲಾಗುವುದು. ಸರ್ವರು ಸೇರಿ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರವಿರಲಿ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ಅರಕಲವಾಡಿ ನಾಗೇಂದ್ರ, ಗು. ಪುರೋಷತ್ತಮ್, ಪಣ್ಯದಹುಂಡಿ ರಾಜು, ಚಾ.ಸಿ. ಸೋಮನಾಯಕ, ಜಿ. ಬಂಗಾರು, ಚಾ.ಗು. ನಾಗರಾಜು, ಶಿವಕುಮಾರ್, ಎಲ್. ಸುರೇಶ್, ಬ್ಯಾಡಮೂಡ್ಲು ಬಸವಣ್ಣ, ಬಸವನಪುರ ರಾಜಶೇಖರ್, ರಿಯಾಜ್ ಪಾಷ, ಬಂಗಾರನಾಯಕ, ಶಿವಕುಮಾರ್ ರಾಮಸಮುದ್ರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.