ಬೆಂಗಳೂರು: 2025ರ ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಉತ್ತಮ ಸಾಧನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರಕಾರ ಜಾರಿಗೆ ತಂದ ಮೂರು ಪರೀಕ್ಷಾ ಮಾದರಿಯ ಯಶಸ್ಸಿಗೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಸಚಿವರು ನೀಡಿದ ಮಾಹಿತಿಯ ಪ್ರಕಾರ, ಈ ಬಾರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 36.65ರಷ್ಟಿದೆ. ಇದು ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಉತ್ತಮವೆಂಬುದನ್ನು ತೋರಿಸುತ್ತದೆ. “ಇದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮ ಮತ್ತು ಬದ್ಧತೆಯ ಫಲ” ಎಂದು ಸಚಿವರು ಹೇಳಿದರು.
“ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಲು ಮತ್ತು ಅವರಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ನಾವು ಜಾರಿಗೆ ತಂದಿರುವ ಮೂರು ಪರೀಕ್ಷಾ ಪದ್ಧತಿ ಉತ್ತಮ ಫಲಿತಾಂಶ ನೀಡಿದೆ. ಈ ಪದ್ಧತಿಯಿಂದಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿದೆ” ಎಂದು ತಿಳಿಸಿದರು.
2025ರ ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ 11,818 ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿದ್ದು, ಅವರಲ್ಲಿ 6,635 ವಿದ್ಯಾರ್ಥಿಗಳು (ಶೇ. 56.14) ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಂಡಿರುವುದು ಈ ಪದ್ಧತಿಯ ಸಕಾರಾತ್ಮಕ ಪರಿಣಾಮವನ್ನು ತೋರಿಸುತ್ತದೆ.
ಅಲ್ಲದೆ, ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಶೇ. 100ರಷ್ಟು ಫಲಿತಾಂಶ ಪಡೆದಿರುವುದು ಹೆಮ್ಮೆಯ ಸಂಗತಿ. ಈ ನಾಲ್ಕು ವಿದ್ಯಾರ್ಥಿಗಳಲ್ಲಿ ಒಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
2025ರ ಪರೀಕ್ಷೆ-2ರ ಅವಕಾಶದಿಂದ ಒಟ್ಟು 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಮುಂದಿನ ವ್ಯಾಸಂಗ ಮುಂದುವರಿಸಲು ಅನುಕೂಲವಾಗಿದೆ.