ಮಂಗಳೂರು (ದಕ್ಷಿಣ ಕನ್ನಡ): ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ತಡರಾತ್ರಿ ಮಂಗಳೂರು ನಗರದ ಜೆಪ್ಪಿನಮೊಗರು ಬಳಿ ನಡೆದಿದೆ. ಮೃತರನ್ನು ಓಂಶ್ರೀ (24) ಮತ್ತು ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಓಂಶ್ರೀ ಅವರು ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಿನಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದು, ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.
ತಲಪಾಡಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಟಲಿಯ ಪ್ರಜೆ ಸಹಿತ ಮೂವರಿಗೆ ಗಾಯಗಳಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.