ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದ ಮಹಿಳೆಯೊಬ್ಬಳನ್ನು ದುಷ್ಕರ್ಮಿಯೊಬ್ಬನು ಬರ್ಬರವಾಗಿ ಹತ್ಯೆಗೈದು, ಶವವನ್ನು ಕಸದ ಲಾರಿಯಲ್ಲಿ ಎಸೆದಿದ್ದಾನೆ. ಚೆನ್ನಮನ್ನಕೇರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ಯುವಕ ಸಂಶುದ್ದೀನ್ ಅಸ್ಸಾಂ ಮೂಲದವನಾಗಿದ್ದಾನೆ. ಪ್ರಾಥಮಿಕ ತನಿಖೆ ವೇಳೆ, ಹುಳಿಮಾವು ಬಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೊಲೆಯಾದ ಆಶಾ ಹಾಗೂ ಆರೋಪಿ ಸಂಶುದ್ದೀನ್ಗೆ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರು ಲಿವ್ ಇನ್ ರಿಲೇಷನ್ನಲ್ಲಿದ್ದರು.
ಆದರೆ ಮೃತ ಮಹಿಳೆ ದಿನಾಲೂ ಮನೆಗೆ ಬರುವಾಗ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು. ಜೊತೆಗೆ ತಡರಾತ್ರಿವರೆಗೂ ಫೋನ್ನಲ್ಲಿ ಮಾತಾಡುತ್ತಿದ್ದಳು. ಇದೇ ಕಾರಣದಿಂದ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ಅತಿರೇಕಕ್ಕೆ ಹೋಗಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಮೂಟೆಗೆ ಹಾಕಿ, ಬೈಕ್ನಲ್ಲಿ ತಂದು ಕಸದ ಲಾರಿಗೆ ಹಾಕಿ ಹೋಗಿದ್ದ ಎಂದು ತಿಳಿದುಬಂದಿದೆ.
ಆಶಾಗೆ ಇದಕ್ಕೂ ಮೊದಲು ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಆಕೆಗೆ ಇಬ್ಬರು ಮಕ್ಕಳಿದ್ದರು. ಜೊತೆಗೆ ಆರೋಪಿ ಸಂಶುದ್ದೀನ್ಗೆ ಮದುವೆಯಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳು ಅಸ್ಸಾಂನಲ್ಲಿದ್ದಾರೆಂದು ಎಂದು ಬಯಲಾಗಿದೆ.
ರಾತ್ರಿ 1:40ಕ್ಕೆ ಕಸ ಹಾಕಲು ಬಂದಿದ್ದ ಸ್ಥಳೀಯ ವ್ಯಕ್ತಿ ಚೀಲ ಬಿಚ್ಚಿದಾಗ ಮೊದಲಿಗೆ ಕೂದಲು ಕಂಡಿತ್ತು. ಬಳಿಕ ಮೃತದೇಹ ಇರೋದು ಗೊತ್ತಾಗಿ ತಕ್ಷಣ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಬಂದಾಗ ಮಹಿಳೆ ಕೊಲೆ ವಿಚಾರ ಬಯಲಾಗಿತ್ತು.
ಇನ್ನು ಸ್ಥಳಕ್ಕೆ ಆಗಮಿಸಿದ ಚೆನ್ನಮನ್ನಕೇರಿ ಪೊಲೀಸರು ಸ್ಥಳೀಯ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ 20 ಗಂಟೆ ಒಳಗಾಗಿಯೇ ಹಂತಕನನ್ನು ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ನೇತೃತ್ವದ ತಂಡ ಬಂಧಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಂತಕನನ್ನ ಬಂಧಿಸಿದ್ದರು.