ಬೆಂಗಳೂರು: ಆರ್ಸಿಬಿಯ ವಿಜಯೋತ್ಸವ ಸಂದರ್ಭ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರ ಅಮಾನತು ರದ್ದುಗೊಳಿಸಿದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಸರ್ಕಾರದ ಪರವಾಗಿ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ತುರ್ತು ವಿಚಾರಣೆ ಕೋರಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಹೈಕೋರ್ಟ್, ಈ ತರಾತುರಿಯ ಅಗತ್ಯ ಏನು ಎಂದು ಪ್ರಶ್ನಿಸಿತು. ಅಧಿಕಾರಿ ಸೇವೆಗೆ ಹಾಜರಾಗಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣದ ವಿಚಾರಣೆ ಅಗತ್ಯವಿದೆ ಎಂದು ಎಜಿ ಪ್ರತಿಕ್ರಿಯಿಸಿದರು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಈ ಮೊದಲು, ಬಿ. ದಯಾನಂದ್ ಮತ್ತು ವಿಕಾಸ್ ಕುಮಾರ್ ಸೇರಿ ಹಲವರನ್ನು ಅಮಾನತು ಮಾಡಲಾಗಿತ್ತು. ವಿಕಾಸ್ ಕುಮಾರ್ ಅರ್ಜಿ ಹಿನ್ನೆಲೆಯಲ್ಲಿ CAT ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಈ ದುರಂತದಲ್ಲಿ 11 ಜನರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.