ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಕರ್ಮಿಗಳು 20ಕ್ಕೂ ಹೆಚ್ಚು ಕೋತಿಗಳಿಗೆ ವಿಷ ಹಾಕಿ ಕೊಂದು, ಅವುಗಳ ಶವಗಳನ್ನು ಎರಡು ಗೋಣಿಚೀಲಗಳಲ್ಲಿ ಮೂಟೆ ಕಟ್ಟಿ ಕೊಡಸೋಗೆ ರಸ್ತೆಯ ಬದಿಯಲ್ಲಿ ಎಸೆದು ಹೋಗಿದ್ದಾರೆ.
ಶವಗಳಲ್ಲಿ ಎರಡು ಕೋತಿಗಳು ಜೀವಂತವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಪಶು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದ್ದು, ಇದೀಗ ಚೇತರಿಸುತ್ತಿವೆ. ಕೋತಿಗಳ ದೇಹಗಳು ವಿಷದ ಪರಿಣಾಮವಾಗಿ ನೀಲಿ ಬಣ್ಣಕ್ಕೆ ತಿರುಗಿದ್ದವು.
ಘಟನಾ ಸ್ಥಳವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ಬರುತ್ತಿದ್ದು, ಅರಣ್ಯ ಇಲಾಖೆ ಮತ್ತು ಶ್ವಾನದಳವು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಇತ್ತೀಚೆಗಷ್ಟೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆ ನಡೆದ ಹಿನ್ನೆಲೆಯಲ್ಲಿ ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ. ವೈದ್ಯಾಧಿಕಾರಿಗಳು ಮೃತ ಕೋತಿಗಳ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.