ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಚರ್ಚೆಗಳು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜಾತ್ಯತೀತ ಜನತಾ ದಳ (ಜೆಡಿಎಸ್) ಇದೀಗ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆಯ ಬಾಣವೇ ಎಸೆದಿದೆ.
ಗುರುವಾರ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಜೆಡಿಎಸ್, “ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯ ಅವರಿಗೆ ಬರಬಾರ್ದಿತ್ತು” ಎಂದು ವ್ಯಂಗ್ಯವಾಡಿದೆ.
“ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದುಕೊಳ್ಳುತ್ತಿರುವುದು, ಅವರ ಸ್ಥಾನದ ಭದ್ರತೆ ಬಗ್ಗೆ ಆತಂಕವಿರುವುದನ್ನೇ ಸೂಚಿಸುತ್ತಿದೆ” ಎಂದು ಜೆಡಿಎಸ್ ಟೀಕಿಸಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ರಂಗನಾಥ್, ರವಿ ಗಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಶಾಸಕರು ಹಾಗೂ ನಾಯಕರು ನಾಯಕತ್ವ ಬದಲಾವಣೆ ಆಗಬೇಕು ಎಂದು ಬಹಿರಂಗವಾಗಿ ಮಾತನಾಡುತ್ತಿರುವುದು ಈ ತಾಳಮೇಳಕ್ಕೆ ತಕ್ಕಂತೆ ಇದೆ.
“ಸಿದ್ದರಾಮಯ್ಯ ಅವರ ಸುತ್ತಲಿನ ಆಪ್ತರು ಈಗ ಕೂಗುಮಾರಿಗಳಂತೆ ಪ್ರಚಾರ ನಡೆಸುತ್ತಿದ್ದಾರೆ” ಎಂದು ಜೆಡಿಎಸ್ ಆರೋಪಿಸಿದೆ.
ಅಷ್ಟೇ ಅಲ್ಲದೆ, “ಕಾಂಗ್ರೆಸ್ ಸಚಿವರು ಹಾಗೂ ಶಾಸಕರಲ್ಲೇ ದುರಾಡಳಿತದ ಬಗ್ಗೆ ಅಸಮಾಧಾನ ಮೂಡಿದೆ. ಇದನ್ನು ವಿಪಕ್ಷಗಳ ಮೇಲೆ ಆರೋಪ ಮಾಡುವ ಮೂಲಕ ಮುಚ್ಚಿ ಹಾಕಲು ಸಾಧ್ಯವಿಲ್ಲ” ಎಂದು ಆಗ್ರಹಿಸಿದೆ.
ಬೆಂಗಳೂರು ಮತ್ತು ರಾಮನಗರ ವಿವಿಗಳ ಹೆಸರಿನ ಬದಲಾವಣೆಯನ್ನೂ ಟೀಕಿಸಿರುವ ಜೆಡಿಎಸ್, “ಇದು ಅಧಿಕಾರದ ಮದ ಮತ್ತು ದರ್ಪದ ಫಲವಾಗಿದೆ. ಜನಾಭಿಪ್ರಾಯವನ್ನೆ ವಿರೋಧಿಸಿ ನಡೆಯುವ ಈ ಕ್ರಮ ಅಕ್ಷಮ್ಯ” ಎಂದು ವಾಗ್ದಾಳಿ ನಡೆಸಿದೆ.