ಬೆಂಗಳೂರು: ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಸಿಎಂ ಅವರು ಬಹಿರಂಗ ವೇದಿಕೆಯಲ್ಲಿ ಕೈ ಎತ್ತಿದ್ದ ಘಟನೆಗೆ ಸಂಬಂಧಿಸಿ, “ಇದು ನಿಮ್ಮ ಅಧಿಕಾರದ ದರ್ಪವೋ? ಮದವೋ? ಅಥವಾ ಹತಾಶೆಯ ತೊಂದರೆಯೋ?” ಎಂದು ಅವರು ಕೇಳಿದ್ದಾರೆ.
ಅಶೋಕ್ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಾಕಿದ ಪೋಸ್ಟ್‌ನಲ್ಲಿ, “ಈ ಘಟನೆ ಒಂದು ಕರ್ತವ್ಯನಿಷ್ಠ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು, ಇಡೀ ಪೊಲೀಸ್ ಇಲಾಖೆಯ ಮನೋಬಲಕ್ಕೆ ಆಘಾತವಾಗಿದೆ. ಸರ್ಕಾರದ ಆಡಳಿತಶಾಹಿಗೆ ಪೆಟ್ಟು, ನೌಕರಶಾಹಿಗೆ ತೀವ್ರ ಧಕ್ಕೆಯಾಗಿದ್ದು, ಇದು ಕ್ಷಮಿಸುವಂತಿಲ್ಲ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮುಂದುವರೆದು, “ಪ್ರತಿ ದಿನವೂ ನಿಮ್ಮ ಯಡವಟ್ಟುಗಳಿಂದ ಸರ್ಕಾರಕ್ಕೂ ನಿಮಗೂ ಕೆಟ್ಟ ಹೆಸರು ಬರುತ್ತಿದೆ. ಈ ಭಂಡ ಬಾಳನ್ನು ಬಿಡಿ. ಅಧಿಕಾರದ ವ್ಯಾಮೋಹ ತ್ಯಜಿಸಿ ರಾಜೀನಾಮೆ ನೀಡಿ. ಗೌರವದಿಂದ ಕುರ್ಚಿ ತ್ಯಜಿಸಿ. ಖಳನಾಯಕನಂತೆ ಇತಿಹಾಸದಲ್ಲಿ ಉಳಿಯುವ ಬದಲು ಮಾನ್ಯ ರಾಜಕಾರಣಿಯಾಗಿ ನೆನಪಾಗುವುದು ಒಳಿತು,” ಎಂದು ಸಲಹೆ ನೀಡಿದ್ದಾರೆ.