ಬೆಂಗಳೂರು: ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲರೂ ಸಿಎಂ ಆಗಲು ಮುಂದಾಗಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಖಂಡಿತವಾಗಿಯೂ ಸಿಎಂ ಬದಲಾವಣೆ ಆಗಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ನುಡಿದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ ಭಯದಿಂದ ಸ್ವತಃ ಸಿದ್ದರಾಮಯ್ಯನವರೇ ಅದನ್ನು ಪದೇ ಪದೇ ಹೇಳುತ್ತಿದ್ದಾರೆ ಎಂದರು.
ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿಕೆ ಶಿವಕುಮಾರ್ ಅವರೇ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ. ಜನರಲ್ಲಿ ವಿಶ್ವಾಸ ಹೊರಟುಹೋಗಿದೆ ಎಂದರು.
ಬೆಂಗಳೂರನ್ನು ಈಗಾಗಲೇ ಒಡೆದು ಹಾಕಿದ್ದಾರೆ. ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ಹೆಸರು ಬದಲಿಸುತ್ತಿದ್ದಾರೆ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು. ದಕ್ಷಿಣ, ಉತ್ತರ ಎಂದು ಹೆಸರು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ ಎಂದು ಹೇಳಿದರು.