ಬೆಂಗಳೂರು: ಕೋಟಿ ಕೋಟಿ ರೂಪಾಯಿ ತೆರಿಗೆ ವಂಚಿಸಿ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಫೆರಾರಿ ಕಾರು ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸುಮಾರು ₹7.5 ಕೋಟಿ ಮೌಲ್ಯದ ಫೆರಾರಿ ಕಾರು ಮಾಲೀಕನೊಬ್ಬ ಮಹಾರಾಷ್ಟ್ರ ನಂಬರ್‌ಪ್ಲೇಟ್ ಬಳಸಿ, ಬೆಂಗಳೂರಿನಲ್ಲಿ ಅನಧಿಕೃತವಾಗಿ ಓಡಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ನಿನ್ನೆ (ಜುಲೈ 2) ಲಾಲ್‌ಬಾಗ್ ಬಳಿ ಆರ್‌ಟಿಓ ಅಧಿಕಾರಿಗಳು ಕಾರು ತಡೆದು ತಪಾಸಣೆ ನಡೆಸಿದಾಗ, ಮಾಲೀಕ 2023ರ ಸೆಪ್ಟೆಂಬರ್‌ರಿಂದ ತೆರಿಗೆ ಪಾವತಿಸದೇ ಕಾರನ್ನು ಬೆಂಗಳೂರಿನಲ್ಲಿ ಓಡಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ಫೆರಾರಿಗೆ ₹1.58 ಕೋಟಿ ಬಾಕಿ ತೆರಿಗೆಇದ್ದು, ಮಾಲೀಕನಿಗೆ ಇಂದು (ಜುಲೈ 3) ಸಂಜೆ ತನಕ ಅಂತಿಮ ಕಾಲಾವಕಾಶ ನೀಡಲಾಗಿದೆ.
ಕಾರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಮಾಲೀಕನ ಜಯನಗರ 5ನೇ ಬ್ಲಾಕ್‌ನ ಮನೆಯ ಮುಂದೆ ನಿಲ್ಲಿಸಿ, ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೊಂದು ಪ್ರಕರಣ ಮಾತ್ರವಲ್ಲ. ಬೆಂಗಳೂರಿನಲ್ಲಿ ಹಲವು ಐಷಾರಾಮಿ ಕಾರುಗಳು ಹೊರರಾಜ್ಯದಲ್ಲಿ ರಿಜಿಸ್ಟರ್ ಮಾಡಿಸಿ, ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಓಡಾಡುತ್ತಿವೆ. ಈ ಕುರಿತು ಈಗಾಗಲೇ ಮೈಸೂರು ಹಾಗೂ ಇತರ ನಗರಗಳಲ್ಲಿಯೂ ತಪಾಸಣೆ ಜೋರಾಗಿದೆ.