ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ಕೆಪ್ಪಯ್ಯನಹಟ್ಟಿಯಲ್ಲಿ, ವರ್ಣಿಕ ಎಂಬ ಬಾಲಕಿ ಗ್ರಾಮಕ್ಕೆ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಳೆ. ಗ್ರಾಮದ ಹಳ್ಳ ಕಾಲುವೆಗಳು ಬರಡಾಗಿ, ಜಮೀನುಗಳು ಬತ್ತಿಹೋಗಿವೆ. ನೀರಿಲ್ಲದೇ ಪ್ರಾಣಿ ಮತ್ತು ಪಕ್ಷಿಗಳೂ ಸಾವನ್ನಪ್ಪುತ್ತಿರುವುದು ನೋವಿಗೆ ಕಾರಣವಾಗಿದೆ ಎಂದು ವರ್ಣಿಕ ತಿಳಿಸಿದ್ದಾಳೆ.
ಕಬಿನಿ ಜಲಾಶಯವು ಈಗ ಭರ್ತಿಯಾಗಿದ್ದು, ಅಲ್ಲಿಂದ ನೀರು ಹರಿಸಬಹುದಾದ ಸಾಧ್ಯತೆ ಇದೆ. ಆ ನೀರನ್ನು ರಾಮಾಪುರ ಹೋಬಳಿಗೆ ಹರಿಸಿದರೆ, “ನಿಮ್ಮನ್ನು ದೇವರಂತೆ ಕಾಣುವೆವು” ಎಂದು ಪತ್ರದಲ್ಲಿ ಬಾಲಕಿ ವರ್ಣಿಕ ಹೇಳಿದ್ದಾಳೆ.
ಬಾಲಕಿಯ ಪತ್ರ ಹಾಗೂ ವೀಡಿಯೋದಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟವಾಗಿ ವಿವರಿಸಿದ್ದು, ಕೊನೆಯಲ್ಲಿ ಗೆಳೆಯರೊಂದಿಗೆ ಕೈ ಜೋಡಿಸಿ ಮನವಿ ಮಾಡುವ ದೃಶ್ಯ ಎಲ್ಲರ ಮನಕಲಕುವಂತಿದೆ.