ಬೆಂಗಳೂರು : ʼನಮ್ಮ ಮೆಟ್ರೋʼ ರೈಲಿನ ಟಿಕೆಟ್ ದರ ಹೆಚ್ಚಳ ಹಿನ್ನೆಲೆಯಲ್ಲಿ ದರ ನಿಗದಿ ಸಮಿತಿ ವರದಿ ಬಹಿರಂಗ ಕೋರಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಬಿಎಂಆರ್‌ಸಿಎಲ್‌ಗೆ ನೋಟಿಸ್ ಜಾರಿಗೊಳಿಸಿದೆ. ವಿಚಾರಣೆ ವೇಳೆ ನೀವು ಇಷ್ಟು ಪ್ರಬಲರಾಗಿದ್ದೂ ನಿಮಗೆ ವರದಿ ಸಿಗುತ್ತಿಲ್ಲವೇ ಎಂದು ತೇಜಸ್ವಿ ಸೂರ್ಯ ಪರ ವಕೀಲರಿಗೆ ನ್ಯಾ.ಸುನಿಲ್ ದತ್ ಯಾದವ್ ಪ್ರಶ್ನೆ ಮಾಡಿದರು.
ಈ ವೇಳೆ ಇದಕ್ಕೆ ಉತ್ತರಿಸಿದ ತೇಜಸ್ವಿ ಸೂರ್ಯ ಪರ ವಕೀಲರು, ಡಿಸೆಂಬರ್ ತಿಂಗಳಲ್ಲೇ ದರ ನಿಗದಿ ಸಮಿತಿ ವರದಿ ನೀಡಿದೆ. ಆದರೂ ಬಿಎಂಆರ್‌ಸಿಎಲ್ ವರದಿ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ ಎಂದು ಹೈಕೋರ್ಟ್‌ಗೆ ಹೇಳಿಕೆ ನೀಡಿದರು.
ವಾದ ಆಲಿಸಿದ ಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.