ಮಂಡ್ಯ: ಮಂಡ್ಯದಲ್ಲಿ ಮೈಸೂರಿನ ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡವರನ್ನು ಶೋಷಿಸುತ್ತಿದ್ದರೆ, ಇನ್ನೊಂದೆಡೆ ‘ಗೋಲ್ಡ್ ಲೋನ್’ ಹೆಸರಿನಲ್ಲಿ ವಂಚನೆ ಮಾಡುವ ಕಂಪನಿಗಳು ತಲೆ ಎತ್ತಿವೆ. ಸಂಕಷ್ಟದಲ್ಲಿರುವ ಜನರ ಮೇಲೆ ಕಣ್ಣುಹಾಯಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತೇವೆ ಎಂಬ ಸುಳ್ಳು ಭರವಸೆ ನೀಡಿ ಚಿನ್ನಾಭರಣ ಎಳೆದುಕೊಳ್ಳುವ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.
‘ಅನಘ ಗೋಲ್ಡ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ನೂರಾರು ಜನರನ್ನು ಮೋಸಗೊಳಿಸಿದ್ದು, ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟು ಹಣ ಪಡೆದಿದ್ದವರನ್ನು ಟಾರ್ಗೆಟ್ ಮಾಡುತ್ತಿದ್ದಳು. ಟೆಲಿಕಾಲರ್ ಮೂಲಕ ಸಂಪರ್ಕಿಸಿ, ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಹಣ ನೀಡುವ ಭರವಸೆ ನೀಡಿ ಜನರನ್ನು ಮರುಳುಗೊಳಿಸುತ್ತಿದ್ದರು. ಇದನ್ನು ನಂಬಿದವರು ಬ್ಯಾಂಕ್‌ನಲ್ಲಿ ಚಿನ್ನ ಬಿಡಿಸಿ ಈ ಕಂಪನಿಗೆ ನೀಡಿದ್ದಾರೆ. ನಂತರ ತಿಂಗಳುಗಟ್ಟಲೆ ಸಾಲ ತೀರಿಸಿ ಚಿನ್ನ ವಾಪಸು ಕೇಳಿದಾಗ ಕಂಪನಿ ಪ್ರತಿನಿತ್ಯ ನೆಪ ಹೇಳುತ್ತಿದ್ದು, ಕೊನೆಗೆ ವಂಚನೆ ನಡೆದಿರುವುದು ತಿಳಿಯಿತು.
ಈ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಪೊಲೀಸರು ತನಿಖೆ ಕೈಗೊಂಡು ಅನಘ ಗೋಲ್ಡ್‌ನ ಮಾಲೀಕ ಪ್ರವೀಣ್, ಪತ್ನಿ ಲಕ್ಷ್ಮಿ ಮತ್ತು ಸಿಬ್ಬಂದಿ ಮಂಜುಳಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ 70ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಸುಮಾರು 3 ಕೆಜಿ ಚಿನ್ನಾಭರಣ, ಮೌಲ್ಯ ಮೂರು ಕೋಟಿ ರೂಪಾಯಿಗಳಷ್ಟು ವಂಚನೆಯಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.