ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು, ಅವರೊಂದಿಗೆ ಸಚಿವರಾದ ಭೈರತಿ ಸುರೇಶ್ ಹಾಗೂ ಕೆ.ಜೆ. ಜಾರ್ಜ್ ಸಹ ಹೋಗಿದ್ದಾರೆ.
ಬೆಳಗ್ಗೆ 11ಕ್ಕೆ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣಿಸುತ್ತಿದ್ದು, ಮಧ್ಯಾಹ್ನ 1:55ಕ್ಕೆ ದೆಹಲಿಗೆ ಆಗಮಿಸಲಿದ್ದಾರೆ. ಸಂಜೆ 4ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ವೈಮಾನಿಕ ಪ್ರದರ್ಶನ ಕುರಿತು ಚರ್ಚಿಸಲಿದ್ದಾರೆ. ಇದಲ್ಲದೆ, ಪರಿಷತ್ ಸ್ಥಾನ, ನಿಗಮ-ಮಂಡಳಿ ನೇಮಕಾತಿ, ಕೆಪಿಸಿಸಿ ಪದಾಧಿಕಾರಿಗಳ ನೇಮಕ ಮತ್ತು ರಾಜ್ಯ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಇತ್ತ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಶಾಸಕರ ಅಸಮಾಧಾನ ನಿವಾರಣೆಗೆ ತೊಡಗಿದ್ದು, ಈಗಾಗಲೇ 40ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿದ್ದು, ಇಂದು 20ಕ್ಕೂ ಹೆಚ್ಚು ಶಾಸಕರೊಂದಿಗೆ ಒನ್-ಟು-ಒನ್ ಮಾತುಕತೆ ನಡೆಸುತ್ತಿದ್ದಾರೆ.
ಸಿಎಂ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಅವರು ಇಂದು ಕೇಂದ್ರ ಸಚಿವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಎತ್ತಿನಹೊಳೆ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಪೈಪೋಟಿಯಲ್ಲಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಮಹತ್ವಪೂರ್ಣವೆಂದು ನಿರೀಕ್ಷಿಸಲಾಗಿದೆ.