ಮಂಡ್ಯ: ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಜೂನ್ ತಿಂಗಳಲ್ಲಿಯೇ ಸಂಪೂರ್ಣ ಭರ್ತಿಯಾಗಿದ್ದರು ಸಹ ಮಂಡ್ಯ ರೈತರ ಬೆಳೆಗಳಿಗೆ ಕಾಲುವೆ ಮೂಲಕ ನೀರು ಹರಿಸಿರಲಿಲ್ಲ. ಅದ್ರೆ ರೈತರ ತೀವ್ರ ಹೋರಾಟದ ಎಚ್ಚರಿಕೆ ಬೆನ್ನಲ್ಲೇ ನಾಲೆಗಳಿಗೆ ನೀರು ಹರಿಸಲಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಬಿದ್ದ ಪರಿಣಾಮ ಕನ್ನಂಬಾಡಿ ಕಟ್ಟೆ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿಯಾಗಿತ್ತು. ಆದರೆ ಮಂಡ್ಯ ಭಾಗದಲ್ಲಿ ಮುಂಗಾರು ಮಳೆ ಇದುವರೆಗೆ ಅಷ್ಟೇನು ಚುರುಕು ಪಡೆದುಕೊಂಡಿಲ್ಲ. ಇದರ ಪರಿಣಾಮ ಈ ಭಾಗದಲ್ಲಿ ಬೆಳೆದ ಬೆಳೆಗಳು ಒಣಗುತ್ತಿವೆ.
ಇತ್ತ ಡ್ಯಾಂ ತುಂಬಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆಯ ಕಾಮಗಾರಿ ನೆಪ ಹೇಳಿ ನಾಲೆಗೆ ಬಿಟ್ಟಿರಲಿಲ್ಲ. ಇದೀಗ ರೈತ ಸಂಘಟನೆಗಳು ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಬಳಿಕ ಇಂದು ಬೆಳ್ಳಂ ಬೆಳಗ್ಗೆ ವಿಸಿ ನಾಲೆಯ ಮೂಲಕ ನಾಲೆಗಳಿಗೆ ನೀರು ಹರಿಸಿದ್ದಾರೆ. ಸದ್ಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.