ಮೈಸೂರು: ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ಮೈಸೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ಭೇಟಿ ನೀಡಿ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ರಾಜ್ಯದ ಎಲ್ಲ 10 ಮಹಾನಗರ ಪಾಲಿಕೆಗಳ ಅಧಿಕಾರಿಗಳು, ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ವಿವೇಕಾನಂದ ಅವರು, ಧರಣಿನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿ ಮನವಿಗಳನ್ನು ಆಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಗಳ ಅಧಿಕಾರಿಗಳು ನ್ಯಾಯಯುತವಾಗಿ ತಮಗೆ ಸಿಗಬೇಕಿರುವ ಸೌಲಭ್ಯಗಳನ್ನೇ ಕೇಳುತ್ತಿದ್ದಾರೆ. 7ನೇ ವೇತನ ಆಯೋಗದನ್ವಯ ಸಂಪೂರ್ಣ ಸಂಬಳ, ಕೆಜಿಐಡಿ ಮತ್ತು ಜಿಪಿಎಫ್ ಅಡಿಯಲ್ಲಿ ವಿಮಾ ಸೌಲಭ್ಯ, ಆರೋಗ್ಯ ವಿಮೆಗಳನ್ನು ಕೇಳುತ್ತಿದ್ದಾರೆ. ಈ ಎಲ್ಲ ಬೇಡಿಕೆಗಳೂ ಸರ್ಕಾರದ ಬೇರೆ ಇಲಾಖೆಗಳಿಗೆ ನೀಡುತ್ತಿರುವ ಸೌಲಭ್ಯಗಳೇ ಆಗಿವೆ. ಇವುಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿಸ್ತರಿಸುವುದು ಸರ್ಕಾರಕ್ಕೆ ಕಠಿಣವಾಗಲಾರದು.
ನಮ್ಮ ವ್ಯವಸ್ಥೆಯಲ್ಲಿ ಪೌರಕಾರ್ಮಿಕರೇ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸುವುದರಿಂದ ಪ್ರತಿಭಟನಾಕಾರರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಾನು ವಿಧಾನ ಪರಿಷತ್ತಿನಲ್ಲೂ ಚರ್ಚೆ ಮಾಡುವುದಾಗಿ ವಿವೇಕಾನಂದ ಅವರು ಮಾಹಿತಿ ನೀಡಿದರು.