ಬೆಂಗಳೂರು: ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಪ್ರಕರಣದ ವಿಚಾರಣೆಯ ವಿಳಂಬದ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಜುಲೈ 9ರಂದು ಹೈಕೋರ್ಟ್ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿ, ಪ್ರಜ್ವಲ್ ರೇವಣ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಬೇಕು ಎಂಬ ಸೂಚನೆ ನೀಡಿದೆ. ಜೊತೆಗೆ, ಅರ್ಜಿ ಸಲ್ಲಿಸಿದ ನಂತರ 10 ದಿನಗಳಲ್ಲಿ ಅದನ್ನು ನಿರ್ಧರಿಸಲು ಕೂಡ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗಿದೆ.
ಪ್ರಜ್ವಲ್ ರೇವಣ್ಣ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಗಂಭೀರ ಆರೋಪಗಳು ಮತ್ತು ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆ ಅರ್ಜಿ ವಜಾ ಆಗಿತ್ತು. ಇದೀಗ ಅವರು ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿದೆ ಎಂಬ ಕಾರಣ ನೀಡಿದ್ರು.
ಪ್ರಜ್ವಲ್ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಹೈಕೋರ್ಟ್ ಈಗ 10 ದಿನಗಳಲ್ಲಿ ನಿರ್ಧಾರ ಕೊಡುವಂತೆ ಸೂಚನೆ ನೀಡಿರುವುದರಿಂದ, ಜಾಮೀನು ಸಿಗುವ ಸಾಧ್ಯತೆ ಬಗ್ಗೆ ಆಶಾಭಾವನೆ ಮೂಡಿಸಿದೆ. ಆದರೆ ಜಾಮೀನು ಸಿಗುತ್ತದೋ ಇಲ್ಲವೋ ಎಂಬುದು ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟವಾಗಲಿದೆ.