ಮಂಗಳೂರು (ದಕ್ಷಿಣ ಕನ್ನಡ): ಹೊರರಾಜ್ಯಗಳಿಂದ ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಮಂಗಳೂರು ಪೊಲೀಸರು ಮೂವರನ್ನು ಇಂದು ಬಂಧಿಸಿದ್ದಾರೆ. ಮಧ್ಯ ಪ್ರದೇಶದ ಕಲಿಯಾ ನಿವಾಸಿ ಮಾಯಾ ರಾಮ್(32), ಮಹಾರಾಷ್ಟ್ರದ ಚೋಪ್ಡಾದ ಪ್ರೇಮಸಿಂಗ್ ರಾಮ ಪವಾರ ( 48 ) ಮತ್ತು ಅನಿಲ್ ಪ್ರಕಾಶ್ ಕೋಲಿ ( 35) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೋನ್ ಗಳು ಹಾಗೂ ನಗದು 1,78,920 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಜುಲೈ 2ರಂದು ಮಂಗಳೂರು ಸೆನ್ ಕ್ರೈಮ್ ಪೊಲೀಸ್ ಠಾಣಾ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಂತೆ ದಾಖಲಿಸಿದ್ದ ಪ್ರಕರಣದ ತನಿಖೆ ಕೈಗೊಂಡು ಮಂಗಳೂರು ನಗರಕ್ಕೆ ಅಕ್ರಮವಾಗಿ ಮಾದಕ ವಸ್ತುಗಳ ಪೂರೈಕೆ ಮಾಡುವ ಆರೋಪದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ತನಿಖೆ ಮುಂದುವರಿಸಿರುವ ಪೊಲೀಸರು ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ತೆರಳಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ. ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಇನ್ನುಳಿದ ಆರೋಪಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.