ಬೆಂಗಳೂರು: ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಸಿಬಿಐ ತನಿಖೆ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ನಡೆಸಿತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿ ಪ್ರಕಾರ, ಹಂಚಿಕೆ ವಿಧಿವಿರುದ್ಧವಾಗಿದ್ದು, ಸತ್ಯಾಂಶ ಹೊರತರಲು ಸಿಬಿಐ ತನಿಖೆ ಅಗತ್ಯ ಎಂದು ಅವರು ವಾದಿಸಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿಗೆ ಈವರೆಗೂ ನೋಟಿಸ್ ಜಾರಿಯಾಗಿಲ್ಲ ಎಂಬ ಕಾರಣದಿಂದ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡುವಂತೆ ಆದೇಶಿಸಿದೆ. ಈ ಸಂದರ್ಭ, ಈ ಪ್ರಕರಣದ ತನಿಖೆಗೆ ರಾಜ್ಯಪಾಲರ ಅನುಮತಿ ಅಗತ್ಯವೇಕೆ? ಎಂಬ ವಿಚಾರದಲ್ಲೂ ನ್ಯಾಯಾಲಯ ಚರ್ಚೆ ನಡೆಸಿತು. ಸಿದ್ದರಾಮಯ್ಯ ಅವರು ನೀಡಿದ ಮೇಲ್ಮನವಿಯೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿತ್ತು.
ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಸಿಎಂ ಜೋಶಿ ನೇತೃತ್ವದ ವಿಭಾಗೀಯ ಪೀಠವು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ. ಈ ಪ್ರಕರಣ ಸಿದ್ದರಾಮಯ್ಯ ಕುಟುಂಬವನ್ನು ಒಳಗೊಂಡಿರುದರಿಂದ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಭಾರಿ ಚರ್ಚೆ ಮೂಡಿಸಲಿದೆ.