ಮೈಸೂರು: ಮೂರನೇ ಆಷಾಢ ಶುಕ್ರವಾರ ಹಿನ್ನೆಲೆ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.
ತಾಯಿ ಚಾಮುಂಡೇಶ್ವರಿಗೆ ಬೆಳಗಿನ ಜಾವದಿಂದಲೇ ಅಂದರೆ ಮುಂಜಾನೆ 3:30 ಕ್ಕೆ ವಿವಿಧ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ.
ತಾಯಿ ಚಾಮುಂಡೇಶ್ವರಿಗೆ ಸರ್ಪಾಲಂಕಾರ ಗಜಲಂಕಾರ ಮಾಡಲಾಗಿದ್ದು, ಗಜಲಕ್ಷ್ಮಿ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ಕಂಗೊಳಿಸುತ್ತಿದ್ದು, ಕಳೆದ ಶುಕ್ರವಾರಕ್ಕಿಂತ ಈ ಬಾರಿ ದೇವಾಲಯ ಅಲಂಕಾರ ಕಡಿಮೆ ಇದೆ.
ಕಳೆದ ಬಾರಿ ಮಾವಿನ ಹಣ್ಣು, ಜೋಳ, ಬಗೆಬಗೆಯ ಹೂವುಗಳಿಂದ ದೇವಾಲಯ ಅಲಂಕಾರ ಮಾಡಲಾಗಿತ್ತು. ಇಂದು ಮೂರನೇ ಆಷಾಡ ಶುಕ್ರವಾರಕ್ಕೆ ತೆಂಗಿನ ಗರಿ ಚಂಡುಹೂವುಗಳಿಂದ ಮಾತ್ರ ಅಲಂಕಾರ ಮಾಡಲಾಗಿದೆ. ಆನೆ ಮೇಲೆ ಕುಳಿತಿರುವ ಉತ್ಸವ ಮೂರ್ತಿ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ.
ಈ ಬಾರಿಯೂ ಕೂಡ ಪೊಲೀಸ್ ಬಿಗಿ ಭದ್ರತೆಯಲ್ಲಿ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನೂಕು ನುಗ್ಗುಲು ಉಂಟಾಗದ ರೀತಿಯಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆ ಜರುಗದಂತೆ ಪೊಲೀಸರನ್ನ ನಿಯೋಜಿಸಲಾಗಿದೆ.
2000 ರೂ, 300 ರೂ ಟಿಕೆಟ್ ಖರೀದಿ ಮಾಡಿ ಬರುವವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಧರ್ಮ ದರ್ಶನ ಹಾಗೂ ಮೆಟ್ಟಿಲುಗಳ ಮೂಲಕವು ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧ ವಿಧಿಸಲಾಗಿದ್ದು, ಲಲಿತ ಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.