Saturday, July 12, 2025
Google search engine

Homeರಾಜ್ಯಮೈಸೂರು ಮೃಗಾಲಯದ ಬಳಿ ಪೆಂಗ್ವಿನ್ ಪಾರ್ಕ್ ನಿರ್ಮಾಣ ಪ್ರಸ್ತಾಪ: ಮೃಗಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ

ಮೈಸೂರು ಮೃಗಾಲಯದ ಬಳಿ ಪೆಂಗ್ವಿನ್ ಪಾರ್ಕ್ ನಿರ್ಮಾಣ ಪ್ರಸ್ತಾಪ: ಮೃಗಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿರುವ ಕಾರಂಜಿ ಕೆರೆಯ ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್ ಧಾಮ ಮಾಡುವುದು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಹೆಚ್ಚು ಆಕರ್ಷಕಗೊಳಿಸಲು ಸೂಚನೆ: ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ, ಹೊಸ ವನ್ಯಜೀವಿಗಳು ಸೇರ್ಪಡೆಯಾದರೆ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶೀ ಮೃಗಾಲಯಗಳೊಂದಿಗೆ  ವಿನಿಮಯ ಕಾರ್ಯಕ್ರಮಕ್ಕೆ ಕ್ರಮ ವಹಿಸಬೇಕು. ಮುಂದಿನ 5 ವರ್ಷಗಳಲ್ಲಿ ಆಯಾ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.

ಗಣಿ ಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿಗೆ ಕೆ.ಎಂ.ಇ.ಆರ್.ಸಿ. ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ದಾವಣಗೆರೆಯ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದರು.

ಬೀದರ್ ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಕ್ಷಿಧಾಮ:

ಬೀದರ್ ನಲ್ಲಿ ವಿದೇಶೀ ಹಕ್ಕಿ, ಪಕ್ಷಿಗಳ ವಿಶಿಷ್ಟವಾದ ಪಕ್ಷಿಲೋಕವನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದ ಸಚಿವರು, ಈ ಯೋಜನೆಗೆ 20 ಕೋಟಿ ರೂ.ಗಳನ್ನು ಹಂಚಿಕೆ  ಮಾಡಲು ಸೂಚಿಸಿದರು.

ಪ್ರವೇಶದರ ಶೇ.20ರಷ್ಟು ಹೆಚ್ಚಳ:

ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯದಲ್ಲಿನ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶದರವನ್ನು ಶೇ.50ರಷ್ಟು ಹೆಚ್ಚಿಸಬೇಕೆಂಬ ಪ್ರಾಧಿಕಾರದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಸಚಿವ  ಈಶ್ವರ ಖಂಡ್ರೆ, ಏಕಾ ಏಕಿ ಶೇ.50ರಷ್ಟು ಹೆಚ್ಚಳ ಮಾಡುವುದು ಸರಿಯಲ್ಲ.  ಶೇ.20ರಷ್ಟು ಮಾತ್ರವೇ ದರ ಹೆಚ್ಚಳ ಮಾಡಿ ಎಂದು ಪ್ರಸ್ತಾವನೆಗೆ ಅನುಮೋದನೆ ನೀಡಿದರು. ಸಫಾರಿ ದರ ಹೆಚ್ಚಿಸದಂತೆ ಸೂಚಿಸಿದರು.

ವನ್ಯಜೀವಿ ವೀಕ್ಷಣೆಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೃಗಾಲಯದಲ್ಲಿ ಮತ್ತು ಜೈವಿಕ ಉದ್ಯಾನದಲ್ಲಿ  ಶುದ್ಧ ಕುಡಿಯುವ ನೀರು, ವಿಶ್ರಾಂತಿ ಧಾಮ, ಪುರುಷ ಮತ್ತು ಮಹಿಳೆಯರ ಶೌಚಾಲಯದ ಜೊತೆಗೆ  ಹೆಚ್ಚಿನ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.

ಯಾವುದೇ ಕಾರಣಕ್ಕೂ ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಮೃಗಾಲಯ ಮತ್ತು ಜೈವಿಕ ಉದ್ಯಾನ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲೂ ಸಚಿವರು ಮಂಡಳಿಯ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ, ಅಧಿಕಾರಿಗಳಾದ ಸುನೀಲ್ ಪಾಂವಾರ್, ಸೂರ್ಯಸೇನ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular