Saturday, July 12, 2025
Google search engine

Homeರಾಜಕೀಯಪಕ್ಷದ ಹಿತಾಸಕ್ತಿಯೆ ನನ್ನ ಗುರಿ : ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ಬೇಡ- ಡಿ.ಕೆ. ಶಿವಕುಮಾರ್

ಪಕ್ಷದ ಹಿತಾಸಕ್ತಿಯೆ ನನ್ನ ಗುರಿ : ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ಬೇಡ- ಡಿ.ಕೆ. ಶಿವಕುಮಾರ್

ಬೆಂಗಳೂರು: “ಪಕ್ಷ ನನಗೆ ಸಂಘಟನೆ ಹಾಗೂ ಡಿಸಿಎಂ ಹುದ್ದೆ ನೀಡಿದ್ದು, ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಹೇಳುವ ಮುನ್ನ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿರುವುದು ಎಷ್ಟು ಸರಿ ಎಂದು ಕೇಳಿದಾಗ, “ನೀವು ನನಗೆ ಹೇಗೆ ತಿರುಗಿಸಿ ಕೇಳಿದರೂ ನಾನಂತೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಬಲಿಯಾಗುವುದಿಲ್ಲ. ನಿಮ್ಮ ಪ್ರಶ್ನೆಗಳಲ್ಲೇ ಉತ್ತರವಿದೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ಮುಂದುವರಿಸಿಕೊಂಡು ಹೋಗುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಧೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷವಾಗಿ ಸ್ವೀಕರಿಸಿದ್ದೇವೆ. ಇದರ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

ಹೈಕಮಾಂಡ್ ಭೇಟಿಯಾಗಿ ಯಾವೆಲ್ಲಾ ರಾಜಕೀಯ ಚರ್ಚೆ ನಡೆಯಿತು ಎಂದು ಕೇಳಿದಾಗ, “ನಾವು ಸುರ್ಜೆವಾಲ ಅವರ ಹೊರತಾಗಿ ಬೇರೆ ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ. ರಾಜ್ಯ ಉಸ್ತುವಾರಿಗಳ ಜೊತೆ ನಮ್ಮ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಸಚಿವರ ಅಭಿಪ್ರಾಯ ಸಂಗ್ರಹಿಸಬೇಕಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ. ಈ ಪ್ರಕ್ರಿಯೆ ಈಗಾಗಲೇ ತಡವಾಗಿದೆ. ಇದು ಅಂತಿಮ ಹಂತಕ್ಕೆ ಬಂದಿದೆ. ಅಧ್ಯಕ್ಷನಾಗಿ ನಾನು ಪಕ್ಷದ ಸಂಘಟನೆಗೆ ಶ್ರಮಿಸಿದವರ ಹೆಸರನ್ನು ಸೇರಿಸಿ ಇದರ ಪ್ರಸ್ತಾವನೆಯನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು” ಎಂದರು.

ನಿಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಿದ್ದಾರೆ

ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಮಾತ್ರವಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಪಕ್ಷದ ರಾಜ್ಯ ಅಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ನಾನು ನಿನ್ನೆ ಬ್ಯುಸಿ ಇದ್ದೆ. ಅದರ ಮಧ್ಯೆ ಮುಖ್ಯಮಂತ್ರಿಗಳ ಹೇಳಿಕೆ ನೋಡಿದೆ. ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನೀವುಗಳು ಸಹ ಮತ್ತೆ ಆ ವಿಚಾರವಾಗಿ ಪ್ರಶ್ನೆ ಮಾಡುವುದು ಸೂಕ್ತವಲ್ಲ” ಎಂದು ಹೇಳಿದರು.

ಈ ಹಿಂದೆ ನನ್ನ ಬಳಿ ಆಯ್ಕೆ ಇಲ್ಲ ಎಂದು ಹೇಳಿದ್ದಿರಿ, ಈಗಲೂ ನೀವು ಅದೇ ಸ್ಥಿತಿಯಲ್ಲಿದ್ದೀರಾ ಎಂದು ಕೇಳಿದಾಗ, “ನಿಮಗೆ ನಮ್ಮ ವಿಚಾರದಲ್ಲಿ ಯಾಕೆ ಗಾಬರಿ? ಈ ವಿಚಾರದಲ್ಲಿ ನಮಗೆ ಗಾಬರಿಯಿಲ್ಲ” ಎಂದರು.

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ ಎಂದು ಕೇಳಿದಾಗ, “ನಿಮ್ಮಲ್ಲೂ ಅನೇಕರಿಗೆ ಅನೇಕ ಆಸೆ ಇರುತ್ತವೆ. ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾತನಾಡಿದ್ದಾರೆ, ಅವರೇ ಪ್ರಶ್ನೆ ಉತ್ತರ ಎಲ್ಲವನ್ನು ನೀಡಿದ್ದಾರೆ. ಸಧ್ಯಕ್ಕೆ ನಾನು ಯಾವುದೇ ಉತ್ತರ ನೀಡುವುದಿಲ್ಲ” ಎಂದು ತಿಳಿಸಿದರು.

2028ರ ಚುನಾವಣೆಗೂ ನನ್ನದೇ ನಾಯಕತ್ವ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಅವರ ವೈಯಕ್ತಿಕ ಹೇಳಿಕೆ. ಅದನ್ನು ಹೇಳುವ ಸಂಪೂರ್ಣ ಅಧಿಕಾರ ಅವರಿಗಿದೆ.ಪಕ್ಷದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವುದು ನನ್ನ ಜವಾಬ್ದಾರಿ. ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಯುವುದು ನನ್ನ ಗುರಿ” ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆಯೇ ಎಂದು ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷನಾಗಿ ಈಗಷ್ಟೇ ಪಕ್ಷದ ಬಾವುಟ ನೀಡಿ ಮಾಜಿ ಸಚಿವೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ” ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ನೀವು ಅವರನ್ನೇ ಕೇಳಿ. ನಾನು ಪಕ್ಷದ ವಕ್ತಾರನೇ ಹೊರತು, ಬೇರೆ ಯಾವುದೇ ವ್ಯಕ್ತಿಯ ವಕ್ತಾರನಲ್ಲ” ಎಂದು ತಿಳಿಸಿದರು.

ನಿಮ್ಮ ಆಸೆ ಈಡೇರುವವರೆಗೂ ನೀವು ಇದೇ ಸಹನೆ, ನಿಷ್ಠೆ ಉಳಿಸಿಕೊಳ್ಳುತ್ತೀರಾ ಎಂದು ಕೇಳಿದಾಗ, “ಪಕ್ಷ ಇದ್ದರೆ ನಾನು. ಪಕ್ಷ ಇಲ್ಲವೆಂದರೆ ನಾನಿಲ್ಲ” ಎಂದರು.

RELATED ARTICLES
- Advertisment -
Google search engine

Most Popular