ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, “ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಬಳಿಕ ಯಾವುದೇ ಕ್ರಾಂತಿ ಇಲ್ಲ, ಎಲ್ಲವೂ ಶಾಂತವಾಗಿರುತ್ತದೆ” ಎಂದು ಹೇಳಿದ್ದಾರೆ. ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, “ಸ್ವತಃ ಸಿಎಂ ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಘೋಷಿಸಿರುವ ಸಂದರ್ಭದಲ್ಲಿ, ಈ ವಿಚಾರವಾಗಿ ಚರ್ಚೆ ನಡೆಸುವುದು ಅನಗತ್ಯ” ಎಂದು ತಿಳಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಎಂದು ಅವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ನಾವು ಪ್ರತಿ ತಿಂಗಳು ಹಣ ಬಿಡುಗಡೆ ಮಾಡುತ್ತಿದ್ದೇವೆ. ಮೇವರೆಗೆ ಹಣ ವಿತರಿಸಲಾಗಿದೆ. ಜೂನ್ ತಿಂಗಳ ಹಣದ ಪ್ರಕ್ರಿಯೆ ನಡೆಯುತ್ತಿದೆ. ಎಚ್.ಎಂ. ರೇವಣ್ಣ ಯಾಕೆ ಮೂರು ತಿಂಗಳಲ್ಲಿ ಹಣ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.