ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಾರ್ಷಿಕ ೫೬ ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ ಎಂದರು.
ಪoಚ ಗ್ಯಾರಂಟಿ ಯೋಜನೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫೦ ಕೋಟಿ ರೂಪಾಯಿಗಳನ್ನು ವರ್ಷಕ್ಕೆ ನೀಡುತ್ತಿದ್ದು ಇದರೊಂದಿಗೆ ಇತರ ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮವಾಗಿ ಮಾಡುತ್ತಿದೆ ಎಂದು ತಿಳಿಸಿದ ಅವರು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಠದಲ್ಲಿ ಇದೆ ಎಂದು ಹೇಳುತ್ತಿರುವ ವಿರೋಧ ಪಕ್ಷಗಳ ಆರೋಪ ಶುದ್ಧ ಸುಳ್ಳು ಎಂದು ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರಿಗೆ ಕಳೆದ ಎರಡು ವರ್ಷಗಳಿಂದ ಹೊಸದಾಗಿ ಸಾಲ ನೀಡಲು ಸಾದ್ಯವಾಗದಿರುವುದಕ್ಕೆ ನಬಾರ್ಡ್ ಬ್ಯಾಂಕ್ ಅನುಧಾನ ನೀಡದಿರುವುದೆ ಕಾರಣವೆಂದು ಮಾಹಿತಿ ನೀಡಿದರಲ್ಲದೇ ಮುಂದಿನ ದಿನಗಳಲ್ಲಿ ಎಂಸಿಡಿಸಿಸಿ ಬ್ಯಾಂಕ್ ಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರುಗಳು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರನ್ನು ಭೇಟಿ ಮಾಡಿ ಹೊಸ ಸದಸ್ಯರಿಗೆ ಸಾಲ ನೀಡಲು ಹಣ ಬಿಡುಗಡೆ ಮಾಡುವಂತೆ ಕೋರಲಾಗುತ್ತಿದೆ ಎಂದರು.
ಪ್ರತಿಯೊಬ್ಬ ರೈತರು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಾಗುವ ಮೂಲಕ ಬಡ್ಡಿ ರಹಿತ ಸಾಲ ಪಡೆದು ಇದರೊಂದಿಗೆ ಸಂಘಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ನಿರ್ದೇಶಕರು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ವ್ಯಾಪ್ತಿಗೆ ಸೇರಿದ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಕೆ.ಆರ್.ನಗರ ವಿದಾನಸಭಾ ಕ್ಷೇತ್ರದ ಎರಡು ತಾಲೂಕುಗಳ ವ್ಯಾಪ್ತಿಗೆ ಸೇರಿದ ಸಹಕಾರಿ ಸಂಘಗಳಿಗೆ ಭೇಟಿ ನೀಡಿ ಪೂರ್ಣ ಮಾಹಿತಿ ಪಡೆದು ಅಗತ್ಯವಾಗಿ ಆಗ ಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿಮಾಡಿ ಬ್ಯಾಂಕಿನ ವತಿಯಿಂದ ದೊರೆಯುವ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡುವುದಾಗಿ ವಾಗ್ಧಾನ ನೀಡಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ವತಿಯಿಂದ ದೊಡ್ಡಸ್ವಾಮೇಗೌಡರಿಗೆ ಮನವಿ ಸಲ್ಲಿಸಿ ಸಂಘದ ಶಿಥಿಲ ಕಟ್ಟಡದ ದುರಸ್ತಿಗೆ ೧೦ ಲಕ್ಷ ರೂ ಅನುದಾನ ಕೊಡಿಸಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೇಸ್ ಮುಖಂಡ ಅಪ್ಪಿ ಪ್ರಸನ್ನ ಸಂಘದ ಅಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಉಪಾಧ್ಯಕ್ಷ ಸಿ.ಎಂ.ನಾಗೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರ ನಾಯಕ, ಹೆಚ್.ಕೆ.ಧನಂಜಯ, ಎನ್.ಪಿ.ಪ್ರಸನ್ನ, ಹೆಚ್.ಕೆ.ಮಂಜುನಾಥ್, ಕೇಬಲ್‌ರವಿ, ಹೆಚ್.ಎಸ್.ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಟಿ.ಉಮೇಶ್, ಸಂಘದ ಸಿಇಒ ಡಿ.ಎಸ್.ಚಂದ್ರಶೇಖರ್, ಸಹಕಾರ್ಯದರ್ಶಿ ಉದಯಕುಮಾರ್, ಗ್ರಾಪಂ ಉಪಾಧ್ಯಕ್ಷ ಹೆಚ್.ಕೆ.ನಾಗೇಶ್, ಸದಸ್ಯ ಹೆಚ್.ಕೆ.ವೆಂಕಟರಾಮು, ಮಾಜಿ ಸದಸ್ಯ ಹೆಚ್.ಎಂ.ಮoಜು, ತಾಪಂ ಮಾಜಿ ಅಧ್ಯಕ್ಷ ನಾಗರಾಜು, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್ ಮತ್ತಿತರರು ಇದ್ದರು.