ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರು ಪ್ರಮುಖ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಉಜ್ವಲ್ ದೇವರಾವ್ ನಿಕಮ್, ಸಿ. ಸದಾನಂದನ್ ಮಾಸ್ಟರ್, ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಡಾ. ಮೀನಾಕ್ಷಿ ಜೈನ್ ಅವರಿದ್ದಾರೆ.
ಉಜ್ವಲ್ ನಿಕಮ್ ಖ್ಯಾತ ಸಾರ್ವಜನಿಕ ಅಭಿಯೋಜಕರು. 1993ರ ಮುಂಬೈ ಸ್ಫೋಟಗಳು ಮತ್ತು 26/11 ಉಗ್ರದಾಳಿಗೆ ಸಂಬಂಧಿಸಿದಂತೆ ಹಲವಾರು ಹೈಪ್ರೊಫೈಲ್ ಪ್ರಕರಣಗಳಲ್ಲಿ ಅವರು ನ್ಯಾಯಾಂಗ ವಾದ ಮಂಡಿಸಿದ್ದಾರೆ. ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ನನ್ನು ಗಲ್ಲಿಗೇರಿಸಲು ನಿಕಮ್ ಮಹತ್ವದ ಪಾತ್ರವಹಿಸಿದ್ದರು.
ಸಿ. ಸದಾನಂದನ್ ಮಾಸ್ಟರ್ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಸಾಮಾಜಿಕ ಕಾರ್ಯಕರ್ತರು. ಸಿಪಿಎಂ ಕಾರ್ಯಕರ್ತರ ದಾಳಿಯಲ್ಲಿ ಕಾಲುಗಳನ್ನು ಕಳೆದುಕೊಂಡರೂ ಅವರು ಸೇವೆಯನ್ನು ಮುಂದುವರೆಸಿದ್ದಾರೆ. 2016ರಲ್ಲಿ ಅವರು ಬಿಜೆಪಿಯಿಂದ ಚುನಾವಣೆ ಹೊರಾಡಿದ್ದರು ಮತ್ತು ಈಗ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.
ಹರ್ಷವರ್ಧನ್ ಶ್ರಿಂಗ್ಲಾ ಭಾರತ ಸರ್ಕಾರದ ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದು, ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜತಾಂತ್ರಿಕ ಕ್ಷೇತ್ರದಲ್ಲಿ ಅವರಿಗೆ ಸಮೃದ್ಧ ಅನುಭವವಿದೆ.
ಇತಿಹಾಸಕಾರರಾದ ಡಾ. ಮೀನಾಕ್ಷಿ ಜೈನ್ ಶಿಕ್ಷಣ ತಜ್ಞೆಯಾಗಿದ್ದು, ಭಾರತೀಯ ಇತಿಹಾಸ ಕುರಿತ ಹಲವು ಕೃತಿಗಳನ್ನು ರಚಿಸಿದ್ದಾರೆ. ಪಠ್ಯಕ್ರಮ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.