ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಕನ್ನಡ ಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡುವ ಪ್ರಯತ್ನ ಆರಂಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಹಳದಿ-ಕೆಂಪು ಬಾವುಟಕ್ಕೆ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ 2017 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೂ ಇದೇ ಬೇಡಿಕೆಯನ್ನು ಕೇಂದ್ರದ ಮುಂದೆ ಇಟ್ಟಿತ್ತು. ಇದೀಗ ಮತ್ತೆ ಪತ್ರ ಬರೆಯುವ ಮೂಲಕ, ಈ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸಲಾಗಿದೆ.
ಪತ್ರ ಬರೆದಿರುವ ಬಗ್ಗೆ ಸಚಿವ ತಂಗಡಗಿ ಮಾಹಿತಿ ನೀಡಿ ಶೀಘ್ರದಲ್ಲೇ ತಂಗಡಗಿ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದ್ದಾರೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡಲಿದ್ದಾರೆ ಎಂದು ತಿಳಿಸಿದರು. “ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೇವಲ ಹೆಸರಿಗಷ್ಟೆ ಇದೆ, ಅನುದಾನವಿಲ್ಲ. ತಮಿಳಿಗೆ ಹೆಚ್ಚು ಅನುದಾನ ಸಿಗುತ್ತಿದೆ, ಆದರೆ ಕನ್ನಡಕ್ಕೆ ಇಲ್ಲ,” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.