ಚಂಡೀಘಡ: 20 ರೂ. ಹಣವನ್ನು ಕೊಡಲು ನಿರಾಕರಿಸಿದ ತಾಯಿಯನ್ನು ಪಾಪಿ ಮಗನೊಬ್ಬ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದಿದೆ.
ಜೈಸಿಂಗ್‌ಪುರ ಗ್ರಾಮದ ನಿವಾಸಿ ರಜಿಯಾ (56) ಹತ್ಯೆಯಾದ ತಾಯಿ. ಮಗ ಜಮ್ಶದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಜಮ್ಶದ್ ಗಾಂಜಾ ವ್ಯಸನಿಯಾಗಿದ್ದ. ಆರೋಪಿಯು ಶನಿವಾರ ರಾತ್ರಿ ತಾಯಿ ಬಳಿ 20 ರೂ. ಹಣ ಕೇಳಿದ್ದ. ರಜಿಯಾ ಹಣ ನೀಡಲು ನಿರಾಕರಿಸಿದ್ದಕ್ಕೆ ಕೊಡಲಿಯಿಂದ ಆಕೆಯ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ರಾತ್ರಿಯಿಡೀ ತಾಯಿಯ ಮೃತದೇಹದ ಪಕ್ಕದಲ್ಲೇ ಕಾಲ ಕಳೆದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ರಜಿಯಾ ಪತಿ ಮುಬಾರಕ್ ಕಳೆದ 4 ತಿಂಗಳ ಹಿಂದೆ ನಿಧರಾಗಿದ್ದರು. ಬಳಿಕ ಮನೆಯಲ್ಲಿ ರಜಿಯಾ ಹಾಗೂ ಮಗ ಇಬ್ಬರೇ ವಾಸಿಸುತ್ತಿದ್ದರು.