ಬೆಂಗಳೂರು: ತಂತ್ರಜ್ಞಾನ ಉಪಯೋಗಿಸಿಕೊಂಡು 16 ದಿನಗಳಲ್ಲಿ ಜಾತಿ ಜನಗಣತಿ ಸಮೀಕ್ಷೆ ಮಾಡಬಹುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕು ಮತ್ತು ರಾಜ್ಯಕ್ಕೆ ಸಂಘರ್ಷ ಏನೂ ಇಲ್ಲ. ರಾಜ್ಯದ ಮಟ್ಟಿಗೆ ನಾವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಮಾಡುತ್ತಿದ್ದೇವೆ. ರಾಜ್ಯದ ವತಿಯಿಂದ ನಮಗೆನು ಮಾನದಂಡಗಳಲ್ಲಿ ಬೇಕು ಅದನ್ನು ಮಾಡುತ್ತೇವೆ. ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮೀಕ್ಷೆ ಮಾಡುವುದಿಲ್ಲ. ಯಾರು ಎಷ್ಟು ಜನ ಇದ್ದಾರೆ ಎಂಬ ಅಂಕಿ ಅಂಶವನ್ನು ಮಾತ್ರ ಕೇಂದ್ರ ಮಾಡುತ್ತದೆ ಎಂದರು.
ಎಸ್ಐಟಿ ತಂಡದಿಂದ ಐಪಿಎಸ್ ಅಧಿಕಾರಿ ಹೊರಗುಳಿಯುವ ವಿಚಾರದ ಕುರಿತು ಮಾತನಾಡಿ, ಅಧಿಕೃತವಾಗಿ ನನಗೆ ಅವರು ಮಾಹಿತಿ ತಿಳಿಸಿಲ್ಲ. ಆದರೆ ಅನ್‌ಅಫಿಷಿಯಲ್ ಆಗಿ ಅವರು ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೆ, ಅವರನ್ನು ಬದಲಾಯಿಸಲಾಗುವುದು ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಬೆಂಗಳೂರಿನ ಬಿಜೆಪಿ ಮುಖಂಡರ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಆಂಧ್ರಪ್ರದೇಶ ಪೊಲೀಸರು ತನಿಖೆ ಮಾಡುತ್ತಾರೆ. ಹತ್ಯೆಯಾದವರು ನಮ್ಮ ರಾಜ್ಯದವರು ಆಗಿರುವುದರಿಂದ ಆಂಧ್ರ ಪೊಲೀಸರು ಇಲ್ಲಿಗೂ ಬಂದು ತನಿಖೆ ಮಾಡುತ್ತಾರೆ. ಆ ರಾಜ್ಯದ ಪೊಲೀಸರ ತನಿಖೆಗೆ ನಮ್ಮ ಪೊಲೀಸರು ಸಹಕಾರ ಮಾಡುತ್ತಾರೆ ಎಂದರು.