Sunday, July 27, 2025
Google search engine

Homeರಾಜ್ಯರಸಗೊಬ್ಬರ ಕೊರತೆ ಇಲ್ಲ, ರೈತರಲ್ಲಿ ಆತಂಕ ಅನಗತ್ಯ: ಎನ್. ಚಲುವರಾಯಸ್ವಾಮಿ ಸ್ಪಷ್ಟನೆ

ರಸಗೊಬ್ಬರ ಕೊರತೆ ಇಲ್ಲ, ರೈತರಲ್ಲಿ ಆತಂಕ ಅನಗತ್ಯ: ಎನ್. ಚಲುವರಾಯಸ್ವಾಮಿ ಸ್ಪಷ್ಟನೆ

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ರೈತರು ಆತಂಕಕ್ಕೆ ಈಡಾಗಬಾರದು, ಅಲ್ಲದೆ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಕಾಸ ಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ಧಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ ಸಚಿವರು, ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ ಹಾಗೂ ಸುಮಾರು ೨ ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಪ್ರದೇಶ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲವು ರೈತರು ಆತಂಕದಿಂದ ಆಗಸ್ಟ್-ಸೆಪ್ಟೆಂಬರ್‌ಗೆ ಬೇಕಾದ ಗೊಬ್ಬರವನ್ನ ಈಗಲೇ ಖರೀದಿಸಲು ಮುಂದಾಗಿದ್ದು ಸಹ ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ, ಜುಲೈ ಮಾಹೆಯ ಬೇಡಿಕೆಯಂತೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿಕೆ ಇದೆ ಒಂದು ವೇಳೆ ಕೆಲವು ನಿರ್ಧಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು, ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಮನವಿ ಮಾಡಿದರು.

ಜುಲೈ ಮಾಹೆಯವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ೫,೩೪,೦೦೯ ಮೆ.ಟನ್. ರಸಗೊಬ್ಬರ (ಎಲ್ಲಾ ವಿಧದ ರಸಗೊಬ್ಬರ ಸೇರಿ) ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ ೪,೩೦,೬೩೩ ಮೆ.ಟನ್. ಸರಬರಾಜಾಗಿದೆ.
ಏಪ್ರಿಲ್ ನಿಂದ ಜುಲೈವರೆಗೆ ರಾಜ್ಯದಲ್ಲಿ ೬,೮೦,೬೫೫ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ ೬,೮೨,೫೦೦ ಮೆ. ಟನ್ ಹಂಚಿಕೆಯಾಗಿದೆ. ಇದರಲ್ಲಿ ೫,೨೬,೮೧೭ ಮೆಟ್ರಿಕ್ ಟನ್ ಸರಬರಾಜಾಗಿದೆ.

ರಾಜ್ಯದಲ್ಲಿ ೩,೪೬,೪೯೯ ಹಳೆ ಯೂರಿಯಾ ದಾಸ್ತಾನು ಉಳಿಕೆ ಇದ್ದು, ಕೇಂದ್ರದಿಂದ ಸರಬರಾಜಾದ ಯೂರಿಯಾ ಸೇರಿದಂತೆ ೮,೭೩,೩೧೫ ಮೆಟ್ರಿಕ್ ಟನ್ ಒಟ್ಟು ಲಭ್ಯತೆ ಇತ್ತು, ಇದರಲ್ಲಿ ೭,೦೮,೮೫೯ ಮೆಟ್ರಿಕ್ ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದ್ದು, ರೈತರಿಗೂ ಮಾರಾಟ ಮಾಡಲಾಗಿದೆ. ಇನ್ನು ೧,೬೪,೫೬ ಮೆಟ್ರಕ್ ಟನ್ ಯೂರಿಯ ದಾಸ್ತಾನು ಉಳಿಕೆಯಿದೆ. ಅಲ್ಲದೆ ಕೇಂದ್ರದಿಂದ ಹಂತ ಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ಆಗಿಂದಾಗಲೇ ಹಂಚಿಕೆ ಮಾಡಿ ವರ್ಗಾವಣೆ ಮಾಡಲಾಗುವುದು.

ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಸಹ ಯೂರಿಯ ಶೀಘ್ರ ಪೂರೈಕೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಯಾವುದೇ ಸಮಸ್ಯೆಗಳಿಲ್ಲದಂತೆ ರಸಗೊಬ್ಬರ ಪೂರೈಕೆ ನಿವಾರಿಸಲು ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ ಎಂದು ಎನ್. ಚಲುವರಾಯಸ್ವಾಮಿ ರವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular