ಬೆಂಗಳೂರು : ನಟ ದರ್ಶನ್ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಸಶಸ್ತ್ರ ಪಡೆಯಿಂದ ಭದ್ರತೆ ನೀಡಿದ ವಿಷಯಕ್ಕೆ ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಗೆ ಭದ್ರತೆ ಕೊಟ್ಟಿದ್ದಾರೋ ಇಲ್ಲವೋ ಎಂಬ ವಿಷಯವೇ ನನಗೆ ಗೊತ್ತಿಲ್ಲ. ಬೇರೆ ರೀತಿಯಲ್ಲಿ ಮಾಡಿದ್ದಾರಾ ಎಂಬುದೂ ಸಹ ನನಗೆ ಗೊತ್ತಿಲ್ಲ. ಅದನ್ನು ನಾನು ವಿಚಾರಿಸುತ್ತೇನೆ. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೇವಾಲ ವಿರುದ್ದ ಸಚಿವ ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಂಗೇನೂ ಗೊತ್ತಿಲ್ಲ ನಮ್ಮನ್ನು ಕರೆದಿದ್ರು ಹೋಗಿದ್ದೆವು. ಸಚಿವ ರಾಜಣ್ಣ ಅವರು ಈ ಬಗ್ಗೆ ಹೇಳಿದ್ದಾರೆ ಎಂದರೆ ಅವರಿಗೆ ವಿಷಯ ಗೊತ್ತಿರಬಹುದು. ಆದರೆ ನನಗೆ ಈ ಬಗ್ಗೆ ಏನೂ ಮಾಹಿತಿ ಇಲ್ಲ. ಇದರ ವಿಷಯವಾಗಿ ಏನೂ ಗೊತ್ತಿಲ್ಲ ಎಂದು ನುಡಿದಿದ್ದಾರೆ. ರಣ್ ದೀಪ್ ಸುರ್ಜೇವಾಲಾ ಅವರು ರಾಜ್ಯದ ಅಧಿಕಾರಿಗಳೊಡನೆ ಸಭೆ ನಡೆಸಿದ್ದರು. ಈ ಬಗ್ಗೆ ಸಚಿವ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.
ಚುನಾವಣಾ ಅಕ್ರಮದಿಂದಾಗಿ ಬಿಜೆಪಿ ಗೆಲುವ ಸಾಧಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಯಾವ ಸಂದರ್ಭದಲ್ಲಿ ಏನು ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಯಾವಾಗ ಏನು ಆಗಿದೆ ಅಂತ ಹೇಳಿದ್ದಾರೆ ಅಷ್ಟೇ ಎಂದು ನುಡಿದರು.
ಮೈಸೂರಿಗೆ ಒಡೆಯರ್ ಅವರಿಗಿಂದ ಸಿದ್ದರಾಮಯ್ಯ ಅವರ ಕೊಡುಗೆಯೇ ಹೆಚ್ಚು ಎಂಬ ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಜಿ. ಪರಮೇಶ್ವರ್ ನೋ ಕಾಮೆಂಟ್ಸ್ ಎಂದು ತೆರಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಶುಕ್ರವಾರ ಬೆಂಗಳೂರಿಗೆ ವಾಪಸಾಗಿದ್ದಾರೆ. ಡೆವಿಲ್ ಚಿತ್ರೀಕರಣಕ್ಕೆ ಥೈಲ್ಯಾಂಡ್ ಗೆ ತೆರಳಿದ್ದ ನಟ ದರ್ಶನ್ ಶುಕ್ರವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 10 ದಿನಗಳ ಹಿಂದೆ ಡೆವಿಲ್ ಸಿನಿಮಾದ ಚಿತ್ರೀಕರಣದ ನೆಪದಲ್ಲಿ ನಟ ದರ್ಶನ್ ಥೈಲ್ಯಾಂಡ್ ಗೆ ತಮ್ಮ ಪತ್ನಿ ಹಾಗೂ ಪುತ್ರನ ಸಮೇತ ತೆರಳಿದ್ದರು.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತೂಗುಗತ್ತಿ ದರ್ಶನ್ ತಲೆಯ ಮೇಲೆ ತೂಗಾಡುತ್ತಿದ್ದು, ಜಾಮೀನು ರದ್ದಾಗುವ ಆತಂಕವೂ ಎದುರಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಜಾಮೀನು ವಿಸ್ತರಣೆಯಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಕಳೆದೆರೆಡು ದಿನಗಳ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದರು ಸಹ ದರ್ಶನ್ ಗೆ ಟೆನ್ಷನ್ ಶುರುವಾಗಿತ್ತು.