ಗದಗ: ರಾಜ್ಯದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು, ಸರ್ಕಾರ ಮುಂಚಿತವಾಗಿ ಸ್ಟಾಕ್ ಮಾಡಬೇಕಿತ್ತು. ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಜಿಲ್ಲೆ ಸೊರಟೂರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯದ ರೈತರಿಗೆ ಯೂರಿಯಾ ಗೊಬ್ಬರದ ತೀವ್ರ ಕೊರತೆ ಎದುರಾಗಿರುವ ಬಗ್ಗೆ ಕಿಡಿಕಾರಿದರು. “ಸರ್ಕಾರ ಮುಂಚಿತವಾಗಿ ಗೊಬ್ಬರದ ಸ್ಟಾಕ್ ಮಾಡಬೇಕಿತ್ತು. ಇದೀಗ ರೈತರಿಗೆ ಅಗತ್ಯವಾದ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡಲಾಗುತ್ತಿಲ್ಲ. ಇದು ಸರ್ಕಾರದ ವೈಫಲ್ಯ,” ಎಂದು ಅವರು ಹೇಳಿದರು.
ಕೇಂದ್ರ ಕೃಷಿ ಸಚಿವರ ಜೊತೆ ಮಾತನಾಡಿ ಗೊಬ್ಬರ ಪೂರೈಕೆಗಾಗಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಬೊಮ್ಮಾಯಿ, “ರಾಜ್ಯದಲ್ಲಿರುವ ಗೊಬ್ಬರವನ್ನು ಕೂಡ ಸಮರ್ಪಕವಾಗಿ ವಿತರಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು,” ಎಂದರು.
ಯತೀಂದ್ರ ಸಿದ್ದರಾಮಯ್ಯ ಅವರ, “ಸಿದ್ದರಾಮಯ್ಯ ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸೂರ್ಯನಿಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಸುವಂತೆ ಇದು. ಇದು ಅಸಾಧ್ಯ. ಸೂರ್ಯ ಎಂದರೆ ಸೂರ್ಯನೇ,” ಎಂದು ತಿರುಗೇಟು ನೀಡಿದರು.
ಮಹದಾಯಿ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, “ಈ ಯೋಜನೆಗೆ ಬಿಜೆಪಿ ಕಾರಣಿಕ. ಮೋದಿಯವರ ನೇತೃತ್ವದ ಸರ್ಕಾರದ ಸಮಯದಲ್ಲೇ ಮಹದಾಯಿ ಆದೇಶ ಹೊರಬಂದಿತು. ಕಾಂಗ್ರೆಸ್ ಯಾವುದೇ ಪ್ರಗತಿ ಸಾಧಿಸಿಲ್ಲ. ಬದಲಾಗಿ ನಮ್ಮ ಕೆಲಸಗಳಿಗೆ ಅಡ್ಡಿ ಮಾತ್ರ ಮಾಡಿದ್ದಾರೆ,” ಎಂದರು.
ಈ ಸಂದರ್ಭ ಶಾಸಕ ಡಾ. ಚಂದ್ರು ಲಮಾಣಿ, ಎಂಎಲ್‌ಸಿ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.