ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಗಜ ಪಡೆ ಸಿದ್ದವಾಗಿದ್ದು, ಇಂದು ತಮ್ಮ ಪ್ರಯಾಣ ಆರಂಭ ಮಾಡಿದೆ. ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸಾಂಪ್ರದಾಯಿಕವಾಗಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ.
ಅಭಿಮನ್ಯು ನೇತೃತ್ವದ ಮೊದಲ ತಂಡ: ಈಗಾಗಲೇ ದಸರಾಗೆ ಗಜಪಡೆಯನ್ನ ಆಯ್ಕೆ ಮಾಡಲಾಗಿದೆ. ಇಂದು ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿನತ್ತ ಹೊರಟಿದ್ದು, ಆನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆಯೊಂದಿಗೆ ಗಜ ಪ್ರಯಾಣ ಆರಂಭ ಮಾಡಲಾಗಿದೆ. ಮೊದಲ ತಂಡದಲ್ಲಿ ಮತ್ತಿಗೂಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಏಕಲವ್ಯ ಹಾಗೂ ಬಳ್ಳೆ ಶಿಬಿರದ ಲಕ್ಷ್ಮಿ, ದುಬಾರೆ ಶಿಬಿರದ ಪ್ರಶಾಂತ, ಧನಂಜಯ, ಕಂಜನ್ ಹಾಗೂ ಕಾವೇರಿ ಆನೆಗಳು ಮೈಸೂರಿನ ಕಡೆ ಹೊರಟಿದ್ದು, ಅಲಂಕಾರಗೊಂಡ ಆನೆಗಳಿಗೆ ಮಧ್ಯಾಹ್ನ 12.34ರಿಂದ 12.59ರ ಶುಭ ಮುಹೂರ್ತದಲ್ಲಿ ಗಜಪಡೆಗಳಿಗೆ ಪೂಜೆ ಮಾಡಲಾಗಿದೆ.
ಇನ್ನು ಗಜಪಡೆ ಪ್ರಯಾಣ ಆರಂಭ ಮಾಡುತ್ತಿರುವ ಕಾರಣದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲನ್ನು ಮದುವಣಗಿತ್ತಿಯಂತೆ ಅಲಂಕಾರ ಮಾಡಲಾಗಿತ್ತು. ಇದರ ಜೊತೆಗೆ ಜಾನಪದ ಕಲಾತಂಡಗಳ ಪ್ರದರ್ಶನ ಸಹ ಇದ್ದು, ರಸ್ತೆಯ ಉದ್ದಕ್ಕೂ ಗಜ ಪಯಣದ ನಾಮಫಲಕಗಳನ್ನ ಹಾಕಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಯೋಜನೆ: ಇನ್ನು ಈ ಸಮಯದಲ್ಲಿ ಅನೇಕ ಸಾಂಸ್ಕೃತಿ ಕಾರ್ಯಕ್ರಮಗಳನ್ನ ಸಹ ಆಯೋಜಿಸಲಾಗಿತ್ತು. ಅದರಲ್ಲೂ ವೀರನಹೊಸಹಳ್ಳಿ ಸಮೀಪ ಪನರ್ವಸತಿಗೊಂಡಿರುವ ಟಿಬೇಟಿಯನ್ ನಿರಾಶ್ರಿತ ಗ್ರಾಮದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಟಿಬೇಟಿಯನ್ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮಾಡಿದರೆ, ನಾಗಪುರ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಗಿರಿಜನ ಬುಡಕಟ್ಟು ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ. ಇದಲ್ಲದೇ, ವೀರಾಗಾಸೆ ಸೇರಿದಂತೆ ಅನೇಕ ಸಾಂಪ್ರಾದಾಯಿಕ ನೃತ್ಯಗಳ ಮೂಲಕ ವಿದ್ಯಾರ್ಥಿಗಳು ಗಜಪಡೆ ಪಯಣಕ್ಕೆ ಶುಭಾಶಯ ಕೋರಿದ್ದಾರೆ.
ಅಭಿಮನ್ಯುವೇ ಕಿಂಗ್: ಈ ಬಾರಿ ಸಹ 59 ವರ್ಷದ ಅಭಿಮನ್ಯು ಅಂಬಾರಿ ಹೊರಲಿದ್ದಾನೆ ಎಂದು ಡಿಎಸ್‌ಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ. ಅಲ್ಲದೇ, ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಆಗಿದ್ದು, ಅವುಗಳ ಹೆಲ್ತ್ ಕಾರ್ಡ್ ಅನ್ನು ದಸರಾ ಹೈ ಪವರ್ ಕಮಿಟಿಗೆ ಕಳುಹಿಸಲಾಗಿತ್ತು. ಅವುಗಳ ಆಧಾರದ ಮೇಲೆ ಯಾವೆಲ್ಲಾ ಆನೆಗಳು ದಸರಾದಲ್ಲಿ ಭಾಗವಹಿಸಲಿದೆ ಎಂಬುದನ್ನ ಹೈ ಪವರ್ ಕಮಿಟಿ ನಿರ್ಧಾರ ಮಾಡಿ ಪಟ್ಟಿ ಬಿಡುಗಡೆ ಮಾಡಿತ್ತು.
ಈ ಬಾರಿಯ ದಸರಾ 11 ದಿನಗಳ ಕಾಲ ನಡೆಯಲಿದ್ದು. ಹೀಗಾಗಿ ಮತ್ತಿಗೋಡು ಕ್ಯಾಂಪ್, ದೊಡ್ಡ ಹರವೆ, ಭೀಮನಕಟ್ಟೆ, ದುಬಾರೆ, ಬಳ್ಳೆ ಹಾಗೂ ಬಂಡೀಪುರ ಕ್ಯಾಂಪ್ಗಳಿಗೆ ಅಧಿಕಾರಿಗಳು ಮತ್ತು ಪಶುವೈದ್ಯರು ಭೇಟಿ ನೀಡ್ಜ್ ಆನೆಗಳ ಆರೋಗ್ಯ ತಪಾಸಣೆ ನಡೆಸಿದ್ದರು.
25 ಆನೆಗಳ ತಪಾಸಣೆ ಮಾಡಲಾಗಿತ್ತು: ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸುಮಾರು 25 ಗಂಡು ಹಾಗೂ ಹೆಣ್ಣಾನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದರು. ಪ್ರತಿವರ್ಷ ಹೆಣ್ಣು ಹಾಗೂ ಗಂಡು ಆನೆಗಳಿಗೆ ವಿವಿಧ ಪರೀಕ್ಷೆಗಳನ್ನ ಮಾಡಲಾಗುತ್ತದೆ. ಮುಖ್ಯವಾಗಿ ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ಕಡ್ಡಾಯವಾಗಿ ಮಾಡಲಾಗುತ್ತದೆ. ಈ ಪರೀಕ್ಷೆ ಮಾಡಲು ಆನೆ ಶಿಬಿರಗಳಲ್ಲಿರುವ ಹೆಣ್ಣಾನೆಗಳ ಮೂತ್ರ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಿ ಟೆಸ್ಟ್ ಮಾಡಲಾಗುತ್ತದೆ.