ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲ್ವೇ ನಿಲ್ದಾಣದಿಂದ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ ಅಮೃತ್ಸರ್-ಕತ್ರಾ ಮತ್ತು ನಾಗ್ಪುರ್-ಪುಣೆ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲುಗಳಿಗೂ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಂಗಳೂರು–ಬೆಳಗಾವಿ ವಂದೇ ಭಾರತ್ ರೈಲು ರಾಜ್ಯದ ಪ್ರಮುಖ ನಗರಗಳಾದ ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿಯೊಂದಿಗೆ ಉತ್ತಮ ಸಂಪರ್ಕ ಕಲ್ಪಿಸಲಿದೆ.
ಈ ರೈಲು ವಾರಕ್ಕೆ ಆರು ದಿನ (ಬುಧವಾರ ಹೊರತುಪಡಿಸಿ) ಸಂಚರಿಸಲಿದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು, ಮಧ್ಯಾಹ್ನ 1:50ಕ್ಕೆ ಬೆಂಗಳೂರಿಗೆ ತಲುಪಲಿದೆ. ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿಗೆ ತಲುಪಲಿದೆ.
ಒಟ್ಟು 8 ಜಿಲ್ಲೆಗಳ ಮೂಲಕ ಹಾದು ಹೋಗುವ ಈ ರೈಲು 611 ಕಿಲೋಮೀಟರ್ ದೂರವನ್ನು 8 ಗಂಟೆ 50 ನಿಮಿಷಗಳಲ್ಲಿ ಕ್ರಮಿಸಲಿದೆ. ಇದು ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಪ್ರಮುಖ ಸಾಧನೆ ಆಗಿದ್ದು, ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ಸೇವೆ ಒದಗಿಸಲಿದೆ.