Wednesday, August 13, 2025
Google search engine

Homeರಾಜ್ಯಆನ್‌ ಲೈನ್‌ ಗೇಮ್‌ ನಿಯಂತ್ರಣಕ್ಕೆ ಸರ್ಕಾರ ಬದ್ದ: ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ

ಆನ್‌ ಲೈನ್‌ ಗೇಮ್‌ ನಿಯಂತ್ರಣಕ್ಕೆ ಸರ್ಕಾರ ಬದ್ದ: ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ

ಬೆಂಗಳೂರು:ಯುವ ಸಮುದಾಯವನ್ನು ಪಿಡುಗಾಗಿ ಕಾಡುತ್ತಿರುವ ಆನ್‌ ಲೈನ್‌ ಗೇಮ್‌ಗಳನ್ನು ನಿಯಂತ್ರಿಸಲು ಸರ್ಕಾರ ಬದ್ದವಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಧಾನಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸುರೇಶ್‌ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು, ಯುವಕರ ಭವಿಷ್ಯ ಹಾಳು ಮಾಡುವ ವಿಚಾರದಲ್ಲಿ ಮಾದಕವಸ್ತುಗಳ ವ್ಯಸನಕ್ಕಿಂತ ಹೆಚ್ಚು ಹಾನಿಯನ್ನು ಆನ್‌ ಲೈನ್‌ ಗೇಮ್‌ಗಳು ಉಂಟು ಮಾಡುತ್ತಿವೆ. ಈ ಪಿಡುಗಿನ ನಿಯಂತ್ರಣಕ್ಕಾಗಿ 2021ರಲ್ಲಿ ಪೊಲೀಸ್‌‍ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಈ ಕಾಯ್ದೆಯನ್ನು ಅಖಿಲ ಭಾರತ ಗೇಮಿಂಗ್‌ ಒಕ್ಕೂಟ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದೆ. 2022ರಲ್ಲಿ ಈ ತಿದ್ದುಪಡಿ ಕಾಯ್ದೆ ರದ್ದಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದರು.

ಕಂಪ್ಯೂಟರ್‌, ಮೊಬೈಲ್‌ ಆ್ಯಪ್‌, ಎಲೆಕ್ಟ್ರಾನಿಕ್‌್ಸ ಉಪಕರಣಗಳನ್ನು ಬಳಸಿ ಆನ್‌ ಲೈನ್‌ ಗೇಮ್‌ ಆಡುವುದನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಕಳೆದ ಏ.8ರಂದು ಆನ್‌ ಲೈನ್‌ ಗೇಮ್‌ ನಡೆಸುವವರ ಸಭೆ ನಡೆಸಿ ನಿಯಂತ್ರಣ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಹಿರಿಯ ಪೊಲೀಸ್‌‍ ಅಧಿಕಾರಿ ಪ್ರಣಮ್‌ ಮೊಹಾಂತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸೆಪ್ಟೆಂಬರ್‌ ನಲ್ಲಿ ಸಮಿತಿ ವರದಿ ನೀಡಲಿದೆ. ಆನ್‌ ಲೈನ್‌ ಗೇಮ್‌ ನಿಯಂತ್ರಿಸಲು ಸಮಿತಿ ಮಾಡುವ ಶಿಫಾರಸ್ಸು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಆನ್‌ ಲೈನ್‌ ಗೇಮ್‌ ನಿಯಂತ್ರಿಸಲು ಬದ್ದವಾಗಿದೆ ಎಂದು ಸಚಿವರು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಆನ್‌ ಲೈನ್‌ ಆಟಗಳಿಗೆ ಸಂಬಂಧಿಸಿದಂತೆ 347 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಜುಲೈ ಅಂತ್ಯಕ್ಕೆ 159 ಪ್ರಕರಣಗಳು ದಾಖಲಾಗಿವೆ ಎಂದೂ ಅವರು ಸದನಕ್ಕೆ ತಿಳಿಸಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಫ್ಯಾಂಟಸಿ ಕ್ರೀಡೆಯನ್ನು ಕೌಶಲ್ಯ ಎಂದು ಪರಿಗಣಿಸಲಾಗಿದೆ. ಆನ್‌ ಲೈನ್‌ ಗೇಮಿಂಗ್‌ 4.5 ಬಿಲಿಯನ್‌ ಡಾಲರ್‌ ವ್ಯವಹಾರವಾಗಿದ್ದು, ಶೇ.28ರಷ್ಟು ಜಿಎಸ್‌‍ಟಿ ವಿಧಿಸಲಾಗುತ್ತಿದೆ. ಆದರೆ ಪ್ರವರ್ತಕರು  ಚೀನಾ ಹಾಗೂ ವಿದೇಶಗಳ ಸರ್ವರ್‌ ಆಧರಿಸಿ ಆಟ ಆಡಿಸುತ್ತಿದ್ದಾರೆ. ಜಿಎಸ್‌‍ಟಿ, ಕೆವೈಸಿ ಯಾವುದೂ ಅನ್ವಯಿಸುವುದಿಲ್ಲ ಎಂಬ ಜಾಹಿರಾತು ನೀಡುತ್ತಾರೆ. ಮೋಸ ಮಾಡಿದರೂ ಏನೂ ಮಾಡಲಾಗುವುದಿಲ್ಲ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ನಿಯಂತ್ರಣ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ಹಂತದಲ್ಲಿ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಆನ್‌ ಲೈನ್‌ ಗೇಮ್‌ ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇದೊಂದು ಗಂಭೀರ ವಿಷಯವಾಗಿರುವುದರಿಂದ ಈ ಅಧಿವೇಶನ ಮುಗಿಯುವುದರೊಳಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.

RELATED ARTICLES
- Advertisment -
Google search engine

Most Popular