Wednesday, August 13, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

ಜಿಲ್ಲಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

ಮಡಿಕೇರಿ : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮಗಳ ಅಯೋಜನೆ ಮೂಲಕ ಮೂರು ದಿನಗಳ ಕಾಲ ಏರ್ಪಡಿಸಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.ಕಂದಾಯ, ಪಂಚಾಯತ್ ರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನಗರಾಭಿವೃದ್ಧಿ, ಪೌರಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭಗೊಂಡವು.

ಹರ್ ಘರ್ ತಿರಂಗಾ ಅಭಿಯಾನ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ವಿವಿಧ ಇಲಾಖೆ ಮೂಲಕ ನಡೆಯಲಿವೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದಂತೆ ವೈವಿಧ್ಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು.

ಶಾಲಾ-ಕಾಲೇಜುಗಳಲ್ಲಿ, ವಸತಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಿಕೆ ಅತೀ ಮುಖ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಮಾತನಾಡಿ ಈಗಾಗಲೇ ಶಾಲಾ-ಕಾಲೇಜು ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತಾ.ಪಂ.ಇಒ ಶೇಖರ್ ಅವರು ಗ್ರಾ.ಪಂ.ಮಟ್ಟದಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಶ್ರಮಿಸಲಾಗಿದೆ ಎಂದರು.

ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿ, ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಿ ಭಾರತ ಸ್ವಾತಂತ್ರ್ಯಕ್ಕೆ 78 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆಗಸ್ಟ್, 13 ರಿಂದ 15 ರವರೆಗೆ ಕೊಡಗು ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಮತ್ತಷ್ಟು ಮಾಹಿತಿ: ಭಾರತ ಸ್ವಾತಂತ್ರ್ಯ ಪಡೆದು 78 ವರ್ಷಗಳು ಪೂರ್ಣಗೊಂಡಿದೆ. ಆದರೆ, ಅದರ ಹಿಂದೆ ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿವೆ. ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ ಈ ಹೋರಾಟಗಳಲ್ಲಿ ಮುಂಚೂಣಿ ನಾಯಕರುಗಳ ಪಾತ್ರ ಎಷ್ಟು ಮುಖ್ಯವಾಗಿರುತ್ತೋ ಅಷ್ಟೇ ಮುಖ್ಯವಾಗಿ ಅವರು ಹೋರಾಟಕ್ಕೆ ಕರೆ ನೀಡಿದಾಗ, ತಮ್ಮ ಮನೆ ಮಠಗಳನ್ನು ಹಾಗೂ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಲಕ್ಷಾಂತರ ಜನರ ಪಾತ್ರವೂ ಮುಖ್ಯ. ಆದರೆ ಅವರುಗಳ ಹೆಸರು ಎಲ್ಲೂ ದಾಖಲಾಗಿಲ್ಲ. ಆದರೆ ಮುಂಚೂಣಿ ನಾಯಕರ ಜೊತೆ ಇವರೆಲ್ಲ ಕೈಜೋಡಿಸಿದ್ದರಿಂದ ಸ್ವಾತಂತ್ರ್ಯ ಕನಸು ಸಾಕಾರವಾಯಿತು.

ಪ್ರಸ್ತುತ ದೇಶಾದ್ಯಂತ ಭಾರತ ಸ್ವಾತಂತ್ರ್ಯದ 79ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಸರ್ಕಾರವು ‘ಹರ್ ಘರ್ ತಿರಂಗಾ’ ಎಂಬ ಘೋಷ ವಾಕ್ಯದೊಂದಿಗೆ ಆಗಸ್ಟ್ 13 ರಿಂದ 15 ರವರೆಗೆ ದೇಶದ ಪ್ರತಿಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿದೆ. ಅದರಂತೆ ಈ ಸಂದರ್ಭದಲ್ಲಿ ನೀವೆಲ್ಲರೂ ಆಗಸ್ಟ್, 13 ರಿಂದ 15 ರವರೆಗೆ ನಿಮ್ಮ-ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜಹಾರಿಸುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಡಳಿತ ಕೋರಿದೆ.

RELATED ARTICLES
- Advertisment -
Google search engine

Most Popular