ಕಲಬುರಗಿ: ಕಲಬುರಗಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ಕಾನೂನು ಚರ್ಚೆಗೆ ಗ್ರಾಸವಾಗಿದೆ. “ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ತಲಾ ಐದು ಲಕ್ಷ ರೂ. ನಗದು ಬಹುಮಾನ ನೀಡುತ್ತೇನೆ” ಎಂಬಂತಾ ಯತ್ನಾಳ್ ಕೊಪ್ಪಳದಲ್ಲಿ ಆ.11ರಂದು ನೀಡಿದ ಹೇಳಿಕೆಗೆ ಕಠಿಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರೋಜಾ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ನೀಡಿದ ದೂರಿನ ಆಧಾರದ ಮೇಲೆ ಕಲಂ 196, 299, 353(1)(c), 353(2) ಬಿಎನ್‌ಎಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಶಾಸಕರು ಧಾರ್ಮಿಕ ಗುಂಪುಗಳನ್ನು ಗುರಿಯಾಗಿಸಿ ಸಮಾಜದಲ್ಲಿ ದ್ವೇಷ ಸೃಷ್ಟಿಸುವ, ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದೊಂದಿಗೆ ಬಹಿರಂಗ ಭಾಷಣಗಳನ್ನು ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಆ.12ರಂದು ರಾತ್ರಿ 10:30ಕ್ಕೆ ದೂರು ಸಲ್ಲಿಸಿದ ಖುರೇಶಿಯವರು, ಶಾಸಕರ ಹೇಳಿಕೆಗಳು ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.