ಬೆಂಗಳೂರು: ಪವಿತ್ರ ಧರ್ಮಸ್ಥಳ ದೇವಾಲಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾರಿ ಆಗುತ್ತಿರುವ ತಪ್ಪು ಮಾಹಿತಿಯ ಹರಿವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ರಾಜ್ಯ ಸರ್ಕಾರವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ವಿ. ಸುನೀಲ್ ಕುಮಾರ್, ಧರ್ಮಸ್ಥಳ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದ್ದು, ಹಿಂದೂ ಸಮುದಾಯಕ್ಕೆ ಭಕ್ತಿಯ ಕೇಂದ್ರವಾಗಿದೆ ಎಂದರು.
ಇತ್ತೀಚೆಗಿನ ಕೆಲವು ಘಟನೆಗಳಲ್ಲಿ ಧರ್ಮಸ್ಥಳದ ಬಗ್ಗೆ ಕೃತಕ ಸುದ್ದಿ ಹರಡುವ ಮೂಲಕ ಜನಮನದಲ್ಲಿ ಅನುಮಾನ ಸೃಷ್ಟಿಸುವ ಮತ್ತು ದೇವಸ್ಥಾನದ ಖ್ಯಾತಿಗೆ ಧಕ್ಕೆಯಾಗುವ ಪ್ರಯತ್ನಗಳು ನಡೆದಿವೆ. ಆದರೆ ಸರ್ಕಾರ ಈ ಕುರಿತಾಗಿ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿದರು.
ತನಿಖೆಗೆ ನೇಮಿಸಲಾದ ಎಸ್‌ಐಟಿ ತಂಡದ ಬಗ್ಗೆ ತನ್ನ ಪಕ್ಷವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾಕ್ಷಿ ಮತ್ತು ದೂರುದಾರರ ಮೇಲೆ ನಾರ್ಕೋ ಪರೀಕ್ಷೆ ನಡೆಸುವಂತೆ ಜಿಲ್ಲಾ ಎಸ್‌ಪಿ ಒತ್ತಾಯಿಸಿದ್ದು, ಇದು ಸತ್ಯ ಬಯಲಿಗೆ ಬರುವ ಮಾರ್ಗವಾಗಬಹುದು ಎಂದರು. ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯಲು ಸರ್ಕಾರ ತಕ್ಷಣ ಎಸ್‌ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
“ಸರ್ಕಾರ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಯಾರು ತಪ್ಪು ಸುದ್ದಿ ಹರಡುತ್ತಿದ್ದಾರೆ, ಅವರ ಬಗ್ಗೆ ಸ್ಪಷ್ಟತೆ ಇಲ್ಲ. ಧರ್ಮಸ್ಥಳದ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದಾಗಲೂ ಸರ್ಕಾರ ಸುಮ್ಮನಿದೆ. ಸರ್ಕಾರದ ಅಜೆಂಡಾ ಏನು? ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಳು ಮಾಡಬೇಕು ಎನ್ನುವ ಅಜೆಂಡಾ ನಿಮ್ಮ ಹೈಕಮಾಂಡಿನಿಂದ ಬಂದಿದೆಯಾ ಎಂದು ಸುನಿಲ್ ಕುಮಾರ್, ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದ ಉದಾಹರಣೆಯನ್ನು ನೀಡಿ, “ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಮಾತುಗಳಿಂದ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವು ತಂದಿದ್ದರು. ಇಂದು ಅವರು ಮತ್ತು ಅವರ ಪಕ್ಷ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ದುರಾಯತನದ ಬಗ್ಗೆ ಮೌನ ವಹಿಸಿದ್ದಾರೆ,” ಎಂದು ಸುನೀಲ್ ಆಕ್ಷೇಪ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಪ್ರತಿಭಟನೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಧರ್ಮಸ್ಥಳದ ಕುರಿತಾದ ತಪ್ಪು ಪಿತೂರಿಯಲ್ಲಿ ಎಸ್‌ಡಿಪಿಐಗೆ ಏನು ಪಾತ್ರವಿದೆ ಎಂಬುದೂ ತನಿಖೆ ಮಾಡಬೇಕು,” ಎಂದು ಆಗ್ರಹಿಸಿದರು.