ರಾಮನಗರ: ಜಗತ್ತಿನಾದ್ಯಂತ ಭಕ್ತರನ್ನು ಹೊಂದಿರುವ ಶ್ರೀಕೃಷ್ಣ ಪವಾಡ ಪುರುಷ ಎಂದು ರಾಮನಗರ ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅವರು ತಿಳಿಸಿದರು.
ಅವರು ಆ. 16ರ ಶನಿವಾರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಸಂಘ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಫಾಟಿಸಿ ನಂತರ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶ್ರೀ ಕೃಷ್ಣ ಅವರು 188 ದೇಶಗಳಲ್ಲಿ ಭಕ್ತರನ್ನು ಹೊಂದಿದ್ದಾರೆ. ದೇಶ ವಿದೇಶಗಳಲ್ಲಿ ಶ್ರೀ ಕೃಷ್ಣನ ನಾಮದಲ್ಲಿ ಧ್ಯಾನ, ಕೃಷ್ಣ ಮಠಗಳಲ್ಲಿ ಭಗವದ್ಗೀತೆ ಉಪದೇಶ, ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಹಾವಿಷ್ಣುವಿನ ಅವತಾರ ಪುರುಷನಾದ ಶ್ರೀ ಕೃಷ್ಣ ದ್ವಾಪರ ಯುಗದಲ್ಲಿ ಜನಿಸಿದರು ಎಂದರು.
ನಾವೆಲ್ಲರು ಕೃಷ್ಣನ ಬಾಲ್ಯವಸ್ಥೆಯನ್ನು ತಿಳಿಯಬೇಕು. ಮಹಾಭಾರತದಲ್ಲಿನ ಯುದ್ಧದ ಸಂದರ್ಭದಲ್ಲಿ ರಚಿತವಾದ ಭಗವದ್ಗೀತೆ 18 ಅಧ್ಯಯನಗಳನ್ನು ತಿಳಿದರೆ ಧರ್ಮವನ್ನು ನೀವು ಕಾಯುತ್ತಿರ ಮತ್ತು ನೀವು ಜೀವನದಲ್ಲಿ ಪರಿಪೂರ್ಣ ಮನುಷ್ಯನಾಗುತ್ತಿರ ಎಂದು ತಿಳಿಸಿದರು.
ಜಾನಪದ ಲೋಕದ ಕ್ಯೂರೇಟರ್ ಡಾ. ಯು.ಎಂ. ರವಿ ಅವರು ಮಾತನಾಡಿ, ಸಮಾಜದಲ್ಲಿ ಅಧರ್ಮ ಹಾಗೂ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ವ್ಯಕ್ತಿಗಳು ಜನಿಸುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅದೇ ರೀತಿ ಆ ಉದಾಹರಣೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಜನಿಸಿ, ಸುಮಾರು 20 ಸಾವಿರ ವರ್ಷಗಳ ಹಿಂದೆ ಸಮಾಜದಲ್ಲಿ ಅಧರ್ಮ, ಅನೀತಿ ವ್ಯವಸ್ಥೆಯನ್ನು ನಾಶಮಾಡಲು ಜನಿಸಿ, ಅದನ್ನೆಲ್ಲಾ ತನ್ನ ದೈಹಿಕ ಮತ್ತು ಮಾನಸಿಕ ಶಕ್ತಿಯಿಂದಾಗಿ ಪತನ ಮಾಡಿದ ಮಹಾನ್ ಚೇತನ ಶ್ರೀಕೃಷ್ಣ ಜನಿಸಿದ ದಿನವಿದು ಎಂದರು.
ನಾಯಕರಾದವರು ಯಾವ ರೀತಿ ಗುಣಲಕ್ಷಣಗಳನ್ನು ಹೊಂದಿರಬೇಕು ಎಂಬುದನ್ನು ಶಾಂತಿ ಪರ್ವದಲ್ಲಿ ಶ್ರೀ ಕೃಷ್ಣರು ಬೋಧನೆ ಮಾಡುತ್ತಾರೆ. ಇತಿಹಾಸದಲ್ಲಿ ಯುದ್ದ, ರಾಜ, ರಾಜನ ವಿಚಾರಗಳು, ರಾಜನ ಅಧಿಕಾರ, ಪ್ರಜೆಗಳು ಹಾಗೂ ಜನರನ್ನು ರಕ್ಷಣೆ ಮಾಡುವ ಕುರಿತು, ರಾಜ ಧರ್ಮ, ನಾಯಕ ಧರ್ಮ ಹಾಗೂ ಇತರೆ ಹಲವಾರು ವಿಚಾರಗಳನ್ನು 20 ಸಾವಿರ ವರ್ಷಗಳ ಹಿಂದೆಯೇ ಶಾಂತಿ ಪರ್ವದಲ್ಲಿ ಬೋಧನೆ ಮಾಡುತ್ತಾರೆ ಎಂದವರು ಹೇಳಿದರು.
ಶ್ರೀ ಕೃಷ್ಣರ ತತ್ವವನ್ನು ಹೇಗೆ ಪರಿಪಾಲನೆ ಮಾಡುತ್ತಿದ್ದೇವೆ ಹಾಗೂ ಹೇಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಎಲ್ಲರೂ ಮನಗಂಡಿದರೆ ಈ ಸಮಾಜದಲ್ಲಿ ಎಲ್ಲರೂ ಸುಖ, ಶಾಂತಿಯಿಂದ ಬದುಕಬಹುದು. ಶ್ರೀ ಕೃಷ್ಣರ ಗೀತೆಯನ್ನು ಉಪದೇಶಿಸಿದ್ದು ಅರ್ಜುನರಿಗೆ ಮಾತ್ರವಲ್ಲ, ಜನಸಾಮಾನ್ಯರನ್ನು ದೃಷ್ಠಿಯಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಶ್ರೀ ಕೃಷ್ಣರು ತಮ್ಮ ಗೀತೆಯ ಉಪದೇಶವನ್ನು ನೀಡಿದ್ದಾರೆ ಎಂದರು.
ಚಿಕ್ಕ ಚಿಕ್ಕ ಸಮುದಾಯಗಳನ್ನು ಗುರುತಿಸಿ ಆ ಸಮುದಾಯದ ಮಹಾನ್ ಚೇತನರಾದ ಮಹಾನ್ ವ್ಯಕ್ತಿಗಳನ್ನು ಆ ಸಮುದಾಯಗಳಲ್ಲಿ ಒಗ್ಗಟ್ಟನ್ನು ಮೂಡಿಸುವ ವಿಚಾರವಾಗಿ ಅವರ ಜಯಂತಿಗಳನ್ನು ಆಚರಣೆ ಮಾಡಿ ಸಮುದಾಯ ಒಗ್ಗಟ್ಟನ್ನು ಮೂಡಿಸುವ ಸಲುವಾಗಿ ಸರ್ಕಾರದ ವತಿಯಿಂದ ಮಹನೀಯರ ಜಯಂತಿಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಹಳೇ ಬಸ್ ನಿಲ್ದಾಣದವರೆಗೆ ಶ್ರೀ ಕೃಷ್ಣರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಶ್ರೀಶ್ರೀಶ್ರೀ ಬಿ.ಎಲ್. ನಾಗಪ್ಪ ಸ್ವಾಮೀಜಿ, ಸಮುದಾಯದ ಮುಖಂಡರುಗಳಾದ ಕೃಷ್ಣ ಯಾದವ್, ರಾಜು, ರೈಡ್ ನಾಗರಾಜ್, ನಾರಾಯಣ್, ಸಿ.ಎನ್.ನಾಗರಾಜು, ಮಾದಯ್ಯ, ನರಸಿಂಹಮೂರ್ತಿ, ವೆಂಕಟರಮಣ, ನರಸಿಂಹಯ್ಯ, ಗೋವಿಂದರಾಜು, ಶಶಿ, ನಟರಾಜು, ಸುರೇಶ್, ಕನ್ನಡ ಮಂಜು, ಆರ್.ಬಿ.ಎಲ್ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.