ಬೆಳಗಾವಿ : ಬೆಳಗಾವಿಯ ರಾಮದುರ್ಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಶಾಕಿಂಗ್ ಘಟನೆ ನಡೆದಿದೆ.
ಟಿವಿಎಸ್ ಸ್ಕೂಟಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.ಶಿವನಮೂರ್ತಿ ದೇವಸ್ಥಾನದ ಹತ್ತಿರ ಭಾನುವಾರ ಘಟನೆ ನಡೆದಿದೆ.
ಅರ್ಚಕ ವಿಜಯಕುಮಾರ ಗಣಪತಿ ಗೋಡಬೋಲೆ (54) ಹಾಗೂ ಟಾಟಾ ಏಸ್ ವಾಹನ ಚಾಲಕ ಗುಲ್ಬರ್ಗದ ಅನೀಲ ರಮೇಶ ಬಿರಾದಾರ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದ ಯಮನೂರೇಶ ಸಿದ್ದಪ್ಪ ಕಬಾಡೆ (26) ಹಾಗೂ ಬ್ಯಾಡಗಿ ತಾಲೂಕಿನ ಕಲ್ಲದೇವರ ಗ್ರಾಮದ ದರ್ಶನ ಬಸಯ್ಯ ಹಿರೇಮಠ (23) ಗಂಭೀರವಾಗಿ ಗಾಯಗೊಂಡಿದ್ದು, ಓರ್ವನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಮತ್ತೊಬ್ಬನನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸವದತ್ತಿಯಿಂದ ರಾಮದುರ್ಗ ಕಡೆಗೆ ಬರುತ್ತಿದ್ದ ಟಾಟಾ ಏಸ್ ನಿಯಂತ್ರಣ ತಪ್ಪಿ ಅರ್ಚಕ ಓಡಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕ ವಿಜಯಕುಮಾರ ಗಣಪತಿ ಗೋಡಬೋಲೆ (54) ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಈ ಸಂಬಂಧ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಘಟನಾ ಸ್ಥಳಕ್ಕೆ ಪಿಎಸ್‌ಐ ಸವಿತಾ ಮುನ್ಯಾಳ ಮತ್ತು ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.