ಬೆಂಗಳೂರು : ಧರ್ಮಸ್ಥಳದ ಮೇಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಾಳಿ ನಡೆಸಿದೆ. ಆ ಧರ್ಮಸ್ಥಳದ ಸಂಪತ್ತು ಲೂಟಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸ್ಫೋಟಕ ಆರೋಪ ಮಾಡಿದ್ದಾರೆ.
‘ಸಿಎಂ ಸಿದ್ದರಾಮಯ್ಯ ಸುತ್ತ ಇರುವವರಿಂದಲೇ ಧರ್ಮಸ್ಥಳವನ್ನು ಅತಂತ್ರ ಮಾಡಲು ಯತ್ನ ನಡೆದಿದೆ. ಎರಡು ವರ್ಷ ಟ್ರೇನಿಂಗ್ ಪಡೆದು ಧರ್ಮಸ್ಥಳ ಮುಗಿಸಲು ರಾಜಕೀಯ ಹುನ್ನಾರ ನಡೆಸಲಾಗಿದೆ. ರಾಜಕೀಯ ಉದ್ದೇಶದಿಂದಲೇ ಎಸ್ ಐಟಿ ರಚನೆ ಮಾಡಿದರು. ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ’ ಎಂದು ಆರ್.ಅಶೋಕ್ ಹೇಳಿದ್ರು.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ‘ಕಾಂಗ್ರೆಸ್ ಸರ್ಕಾರ ಕುತಂತ್ರದ ಮೂಲಕ ಧರ್ಮಸ್ಥಳವನ್ನು ಅತಂತ್ರ ಮಾಡಿದ್ದಾರೆ. ನಗರ ನಕ್ಸಲರನ್ನು ಬಿಟ್ಟು ಅಲ್ಲಿನ ಸಂಪತ್ತು ಲೂಟಿ ಮಾಡಲು ಯತ್ನಿಸಿದ್ದಾರೆ’ ಎಂದು ಕಿಡಿಕಾರಿದರು.
ಬಿಜೆಪಿ ಬಂದರೆ ಹಿಂದೂ ದೇಗುಲಗಳ ರಕ್ಷಣೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ರಕ್ಷಣೆಗೆ ಕಾನೂನು ತರಲಿದೆ. ಧರ್ಮಸ್ಥಳವು ಎಲ್ಲಾ ಹಿಂದೂಗಳಿಗೆ ಸೇರಿದೆ. ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬಿಜೆಪಿ–ಜೆಡಿಎಸ್ ಒಟ್ಟಿಗೆ ಹೋರಾಟ ನಡೆಸಲಿವೆ. ವಿಧಾನಸಭೆಯಲ್ಲಿ ನಾವು ಒಟ್ಟಿಗೆ ಹೋರಾಡಿದ್ದೇವೆ, ಹೊರಗಡೆ ಪ್ರತ್ಯೇಕ ಹೋರಾಟ ನಡೆಯುತ್ತಿದೆ. ನಾವು ಅಣ್ಣ-ತಮ್ಮಂದಿರಂತೆ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಹಿಂದೂಗಳ ಭಾವನೆಗೆ ಧಕ್ಕೆಯಾದರೆ ರಾಜ್ಯವೇ ದಂಗೆ ಏಳಲಿದೆ ‘ಕಾಂಗ್ರೆಸ್ ಸರ್ಕಾರದಿಂದ ಚಾಮುಂಡಿ ತಾಯಿಯ ಪೂಜೆ ನಡೆಯುತ್ತಿಲ್ಲ. ವೋಟಿನ ಪೂಜೆ ನಡೆಯುತ್ತಿದೆ. ಈ ರೀತಿಯ ಧೋರಣೆ ಮುಂದುವರಿದರೆ ರಾಜ್ಯವೇ ದಂಗೆ ಏಳುವ ಸ್ಥಿತಿ ಬರಲಿದೆ. ಡಿ.ಕೆ. ಶಿವಕುಮಾರ್ ತಕ್ಷಣವೇ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು’ ಎಂದು ಆರ್.ಅಶೋಕ್ ಆಗ್ರಹಿಸಿದರು.
ರಾಜ್ಯ ಸರ್ಕಾರ ಪದೇ ಪದೇ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
‘ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳ ಆಸ್ತಿಯಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ನೇರವಾಗಿ ಹಿಂದೂಗಳಿಗೆ ಮಾಡಿದ ಅವಹೇಳನ. ಹಾಗಾದರೆ, ಚಾಮುಂಡಿ ದೇವಸ್ಥಾನವನ್ನೇನು ವಕ್ಫ್ ಬೋರ್ಡ್‌ಗೆ ಸೇರಿಸಿ ಮಸೀದಿ ಮಾಡಲು ಹೊರಟಿದ್ದೀರಾ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ರಾಜ್ಯಸಭೆ ಸದಸ್ಯರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕರೆದ ಪ್ರಕರಣವನ್ನು ಮುಚ್ಚಿ ಹಾಕಿದಿರಿ, ಈಗ ಮೈಸೂರು, ವಿಜಯನಗರ ಸಾಮ್ರಾಜ್ಯ ಹಾಳು ಮಾಡಿದ ಮುಸ್ಲಿಮರಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ನಾಚಿಕೆಗೇಡು. ತಾಯಿ ಭುವನೇಶ್ವರಿಯನ್ನು ವಿಗ್ರಹ ಮಾಡಿದ್ದೀರಿ, ಬಾವುಟವನ್ನು ಅರಿಶಿನ –ಕುಂಕುಮ ಮಾಡಿಟ್ಟಿದ್ದೀರಿ ಎಂದು ಬಾನು ಮುಷ್ತಾಕ್ ಟೀಕಿಸಿದ್ದರು. ಹಾಗಾದರೆ, ಅರಿಶಿಣ-ಕುಂಕುಮ ಹಚ್ಚದೇ ಸೆಂಟ್ ಹೊಡೆಯಬೇಕಿತ್ತಾ’ ಎಂದು ಕಿಡಿಕಾರಿದರು.
‘ಇತಿಹಾಸ ಗೊತ್ತಿಲ್ಲದ ಬಾನು ಮುಷ್ತಾಕ್ರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿ ರಾಜ್ಯದ ಜನರಿಗೆ ಸರ್ಕಾರ ದ್ರೋಹ ಮಾಡಿದೆ. ಇದು ಹಿಂದೂಗಳ ಸರ್ಕಾರ ಅಲ್ಲ, ಅಲ್ಪಸಂಖ್ಯಾತರ ಸರ್ಕಾರ’ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.