ದಾವಣಗೆರೆ: ದಾವಣಗೆರೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಪನಿರ್ದೇಶಕರಾದ ಮಹೇಶ್ವರಪ್ಪ ಕೆ. ಇವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ವಿಷಯದಲ್ಲಿ ಮಂಡಿಸಿದ ಕುವೆಂಪು ಕಾವ್ಯ-ಸಮಕಾಲೀನ ಮೌಲ್ಯಗಳು ಎಂಬ ಮಹಾಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಲಾಗಿದೆ.
ಇವರು ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಲ್ಲೂರಹಳ್ಳಿ ಗ್ರಾಮದವರು. ಇತಿಹಾಸ ಮತ್ತು ಕನ್ನಡ ವಿಷಯದಲ್ಲಿ ಎಂ.ಎ ಪದವಿ ಪಡೆದ ಇವರು ಮೊದಲು ಶಾಲಾ ಶಿಕ್ಷಕರಾಗಿ ನೇಮಕವಾಗಿದ್ದರು. ನಂತರ ಭೂ ಮಾಪನ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಅಧೀಕ್ಷಕ ಹುದ್ದೆಗೆ ಬಡ್ತಿ ಪಡೆದು ಸೇವೆ ಸಲ್ಲಿಸುತ್ತಿರುವಾಗ ಕೆಪಿಎಸ್‍ಸಿಯಿಂದ 1998 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಗಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಕ ಹೊಂದಿದರು.
ಪ್ರಸ್ತುತ ದಾವಣಗೆರೆಯಲ್ಲಿ ಉಪನಿರ್ದೇಶಕರಾಗಿ ಉನ್ನತ ಹುದ್ದೆಗೇರಿದರೂ ಕುವೆಂಪು ಅವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿ ಅವರ ಸಾಹಿತ್ಯದ ವಿಷಯವಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.