ಧರ್ಮಸ್ಥಳ : ‘ಸತ್ಯ ಬಿಟ್ಟು ಹೋಗಿಲ್ಲ, ಹೋಗುವುದೂ ಇಲ್ಲ. ಧರ್ಮಸ್ಥಳದ ಕೇಸ್‌ನಲ್ಲಿ ಶ್ರೀಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದರೂ, ಭಕ್ತರು ತಾಳ್ಮೆಯಿಂದ ಇರಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಜೈನರ ಸಭೆಯಲ್ಲಿ ಮಾತಾಡಿದ ವೀರೇಂದ್ರ ಹೆಗ್ಗಡೆ, ‘ಎಸ್ಐಟಿ ತನಿಖೆಯಿಂದ ಒಂದೊಂದೇ ಸತ್ಯಗಳು ಹೊರಬರುತ್ತಿವೆ. ತನಿಖೆ ಮುಗಿಯುವವರೆಗೆ ಜಾಸ್ತಿ ಮಾತಾಡುವುದಿಲ್ಲ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
‘ಮಹಿಳೆಯರು, ಭಕ್ತಾದಿಗಳು ಧರ್ಮಸ್ಥಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರೂ ತಾಳ್ಮೆ ಕಳೆದುಕೊಳ್ಳಬಾರದು. ಶಾಂತಿಯಿಂದ ವರ್ತಿಸಬೇಕು. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ರು.
ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ವೇದನೆ ಪಡುತ್ತಿದ್ದಾರೆ ಎಂದು ಭಕ್ತರು ಹೇಳುತ್ತಾರೆ. ಜನರು ನಮಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಿದ್ದಾರೆ. ಹೆಣ್ಮಕ್ಕಳು ಎಲ್ಲಾ ರೀತಿಯಲ್ಲೂ ತಯಾರಾಗಿದ್ದಾರೆ. ಪ್ರತಿಭಟನೆಗೆ ನಡೆಸುತ್ತಿದ್ದಾರೆ. ಆದರೆ ಎಲ್ಲರೂ ಸಯಂಮದಿಂದ ಇರಬೇಕು ಎಂದು ಮನವಿ ಮಾಡಿದರು.
ಈಗ ನಮಗೆ ಫಲ ಸಿಗುತ್ತಿದೆ. ಯಾಕೆಂದರೆ, ನಾನು ಸತ್ಯ ಬಿಟ್ಟು ಎಂದು ಹೋಗಿಲ್ಲ ಹೋಗುವುದು ಇಲ್ಲ. ಶಾಂತತೆಯನ್ನು ಎಲ್ಲರೂ ಕಾಪಾಡಬೇಕು ತಾಳ್ಮೆಯಿಂದ ಇರಬೇಕು ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ರು.
ಧರ್ಮಸ್ಥಳಕ್ಕೆ ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಬಂದಿರುವುದು ದೊಡ್ಡ ವಿಷಯ. ಅವರಿಂದಾಗಿ ಇವತ್ತು ಕ್ಷೇತ್ರಕ್ಕೆ ಕಳೆ ಬಂದಿದೆ. ಎಲ್ಲಾ ಜೈನ ಸ್ವಾಮಿಗಳು ನಿಮ್ಮ ಜೊತೆಗೆ ಇದ್ದೇವೆ ಎಂದಿದ್ದಾರೆ ಅಂತ ವೀರೇಂದ್ರ ಹೆಗ್ಗಡೆ ಹೇಳಿದ್ರು.
ಸತ್ಯ ಅನ್ನುವುದು ಒಂದೇ. ಎಲ್ಲರೂ ಕೂಡ ದಶ ಧರ್ಮಗಳನ್ನು ಪಾಲಿಸಲೇಬೇಕು. ಹಲವಾರು ಪೂಜ್ಯರು ಬಂದಿರುವುದಕ್ಕೆ ವಿಶ್ವಾಸ ಮಾಡಿದೆ. ತಮಿಳುನಾಡಿನಿಂದ ಸ್ವಾಮೀಜಿಗಳು ಬಂದಿದ್ದಾರೆ. ಅವರು ಒಂದು ಸನ್ನೆ ಕೊಟ್ಟರೆ ಸಾಕು ಸಾವಿರಾರು ಜನ ಸೇರುತ್ತಾರೆ. ಆದ್ದರಿಂದ ಅಂಥಾ ಮಹನೀಯರಿಗೆ ನನ್ನ ಧನ್ಯವಾದಗಳು ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ನಿಮ್ಮ ಪ್ರೀತಿಯನ್ನು ಸ್ವಾಮಿಗೆ ಒಪ್ಪಿಸುತ್ತೇನೆ
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ‘ಕ್ಷೇತ್ರದ ಮೇಲಿನ ಗೌರವದಿಂದ ಬಹಳ ಜನ ಬಂದಿದ್ದೀರಿ. ಮನಸಾರೆ ಗೌರವ ಸೂಚಿಸುವವರು ಇದ್ದೀರಿ. ನಿಮ್ಮ ಪ್ರೀತಿಯನ್ನು ಸ್ವಾಮಿಗೆ ಒಪ್ಪಿಸುತ್ತೇನೆ. ಅದನ್ನು ಹೊರಲು ನನ್ನಿಂದ ಸಾಧ್ಯವಿಲ್ಲ’ ಎಂದು ಹೇಳಿದರು.
‘ಮಂಜುನಾಥ ಸ್ವಾಮಿ ನಿಮಗೆ ಆಶೀರ್ವಾದ ಮಾಡಲಿ‘
‘ಸಮಯ ಬಂದಾಗ ಹೆಚ್ಚಿನ ವಿಚಾರ ಮಾತನಾಡುತ್ತೇನೆ. ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಕ್ಷೇತ್ರದ ಬಗ್ಗೆ ಅಪಾರವಾದ ಅಭಿಮಾನದಿಂದ ಹಲವಾರು ಜನ ಬಂದಿದ್ದಾರೆ. ಬಂಟ್ವಾಳ ಮಾಜಿ ಶಾಸಕರಾದ ನಾಗರಾಜ ಶೆಟ್ಟಿ ಕಣ್ಣೀರಾಕಿದ್ರು. ಕ್ಷೇತ್ರವನ್ನು ಮನಸಾರೆ ಗೌರವಿಸುವವರಿದ್ದೀರಿ, ಮನಸಾರೆ ಪ್ರೀತಿಸುವವರಿದ್ದೀರಿ, ಆದ್ರೆ ನಾನು ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ರು.
‘ನಿಮ್ಮ ಅಭಿಮಾನವನ್ನು ನಾನು ಹೊರಲಾರೆ, ನಿಮ್ಮ ಪ್ರೀತಿಯನ್ನು ನಾನು ಹೊರಲಾರೆ, ಅಣ್ಣಪ್ಪ ಸ್ವಾಮಿಗೆ ಒಪ್ಪಿಸುತ್ತೇನೆ, ಮಂಜುನಾಥ ಸ್ವಾಮಿ ನಿಮಗೆ ಆಶೀರ್ವಾದ ಮಾಡಲಿ. ಸಮಯ ಬಂದಾಗ ನಾನು ಮಾತನಾಡುತ್ತೇನೆ, ಈಗ ಜಾಸ್ತಿ ಮಾತನಾಡಲ್ಲ’ ಎಂದು ಹೇಳಿದರು.