Friday, August 29, 2025
Google search engine

Homeರಾಜ್ಯಸುದ್ದಿಜಾಲಮಾಗಡಿಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ಮಾಗಡಿಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ರಾಮನಗರ: ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಮಾಗಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ, ಅದಕ್ಕಾಗಿ 40 ಕೋಟಿ ರೂಪಾಯಿಗಳ ತಾಲ್ಲೂಕು ಆಸ್ಪತ್ರೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಅದರಂತೆಯೇ ಬಸ್ ಡಿಪೋ, ಬಸ್ ನಿಲ್ದಾಣ ನಿರ್ಮಾಣ ಹಾಗೂ ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಹೊಸ ಬಸ್‌ಗಳನ್ನು ಓಡಿಸಲಾಗುವುದು ಅದಕ್ಕಿಂತಲೂ ಮುಖ್ಯವಾಗಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಇಲ್ಲಿ ಕಟ್ಟಿದ ಐತಿಹಾಸಿಕ ಕೋಟೆಯನ್ನು 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸುವ ಕೆಲಸ ಪ್ರಾರಂಭಿಸಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಭಾರಿ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಅವರು ಆ. 29ರ ಶುಕ್ರವಾರ ಮಾಗಡಿ ಪಟ್ಟಣದಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು. 

ಇದೊಂದು ಐತಿಹಾಸಿಕ ಕಾರ್ಯಕ್ರಮ, ನಾವೆಲ್ಲಾ ಮಾಗಡಿ ಕೋಟೆಯಲ್ಲಿ ನಿಂತು ಬೆಂಗಳೂರು ಕಟ್ಟಿದ ಕೆಂಪೇಗೌಡರ ಋಣ ತೀರಿಸಲು ಸೇರಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಅವರು, ಈ ಭಾಗದ ಶಾಸಕರಾದ ಬಾಲಕೃಷ್ಣ ಅವರು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸುಮಾರು 40 ಕೋಟಿ ರೂಪಾಯಿಗಳನ್ನು  ನೂತನ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದಾರೆ, ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಅದೇ ರೀತಿ ಕುದೂರು ಆಸ್ಪತ್ರೆಗೆ ಹೊಸ ರೂಪ ನೀಡುವ ಭರವಸೆ ನೀಡಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ನೂತನ ಬಸ್ ಸ್ಟಾಂಡ್ ಮತ್ತು ಡಿಪೋ ನಿರ್ಮಾಣ ಮಾಡುವ ಕುರಿತು ವಾಗ್ವಾದ ನೀಡಿದ್ದಾರೆ. ಕೆಂಪೇಗೌಡು ಕಟ್ಟಿದ ಮಾಗಡಿ ಕೋಟೆ ಹಾಗೂ ಕೆಂಪಾಪುರದ ಸಮಾದಿ ಅಭಿವೃದ್ಧಿ ಮಾಡುವ ಕೆಲಸಗಳನ್ನು ಕೈಗೊಳ್ಳಲಾಗಿದೆ, ಶಿವಕುಮಾರ ಸ್ವಾಮಿಜೀ ಹಾಗೂ ಆದಿ ಚುಂಚನಗಿರಿ ಶ್ರೀಗಳು ಜನ್ಮ ತಳೆದ ಈ ಭೂಮಿ ಪವಿತ್ರ ಭೂಮಿ ಇದಾಗಿದೆ ಎಂದರು.

ರಾಜ್ಯ ಸರ್ಕಾರ ಅಭಿವೃದ್ಧಿಯ ಕಡೆಗೆ ಮಾತ್ರ ಗಮನ ಹರಿಸುತ್ತಿದೆ, ಈ ಭಾಗದ ಭೂಮಿಯು ಬೆಂಗಳೂರಿಗೆ ಆಶ್ರಯ ಭೂಮಿಯಾಗಿತ್ತು, ಸಮಸ್ಯೆಗಳು ಯಶಸ್ವಿಯಾಗಬೇಕಾದರೆ, ಕಷ್ಟಗಳು ನಿವಾರಣೆಯಾಗಬೇಕಾದರೆ ಶ್ರಮಪಟ್ಟಾಗ ಮಾತ್ರ ಫಲವನ್ನು ಕಾಣುತ್ತೇವೆ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೇ ಬದುಕಿದರೆ ಬದುಕಿಗೆ ಅವಮಾನ. ದೇವರು ಅವಕಾಶ ನೀಡಿದಾಗ ಅದನ್ನು ಬಳಸಿಕೊಳ್ಳಬೇಕು ಎಂದರು.

ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ 5 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಮಾಗಡಿ ಯೋಜನಾ ಪ್ರಾಧಿಕಾರದಿಂದ 20 ಕೋಟಿ ರೂ.ಗಳನ್ನು ಗೌರಮ್ಮನ ಕೆರೆ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ. 159 ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಅಲ್ಲಿನ ಜನರ ದಾಖಲೆಗಳನ್ನು ಕೊಟ್ಟು ಅವರ ಆಸ್ತಿಗಳಿಗೆ ಗ್ಯಾರಂಟಿ ನೀಡಲಾಗಿದೆ. ಸುಮಾರು 1500 ಜನರಿಗೆ ಇ-ಸ್ವತ್ತು ವಿತರಣೆಯಾಗಿದೆ. ಉಳಿದವರಿಗೆ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಈ ಭಾಗದ ಜನರ ಏಳಿಗೆಗಾಗಿ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲಾಗಿದೆ. ಸತ್ತೆಗಾಲದಿಂದ ಸುಮಾರು 90 ಕೋಟಿ ರೂ.ಗಳ ವೆಚ್ಚದಲ್ಲಿ ಮಾಗಡಿ ಭಾಗದ ಸುಮಾರು 44 ಕರೆಗಳಿಗೆ ವೈ.ಜಿ. ಗುಡ್ಡೆ ಮುಖಾಂತರ ನೀರು ತುಂಬುವ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಮಂಚನಬೆಲೆ ಜಲಾಶಯಕ್ಕೆ 13 ಕೋಟಿ ರೂ.ಗಳ ವೆಚ್ಚದಲ್ಲಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. 35 ಕೋಟಿ ರೂ. ವೆಚ್ಚದಲ್ಲಿ ಅನೇಕ ರಸ್ತೆಗಳು, ಚರಂಡಿಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಶ್ರೀರಂಗ ಯೋಜನೆ ಜಾರಿಗೊಳಿಸಲಾಗಿದೆ. ಇಂತಹ ನೂರಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಇಡೀ ರಾಜ್ಯದ ಉದ್ದಗಲಕ್ಕೂ ಸಹ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ 40 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಒಳ ಮೀಸಲಾತಿ ಶಕ್ತಿ ತುಂಬಲಾಗಿದೆ ಇಡೀ ರಾಜ್ಯದಲ್ಲಿ ಲಂಬಾಣಿ, ಬೋವಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ವರ್ಗಗಳಿಗೂ ಸಹ   ಸರ್ವರಿಗೂ ಸಮಪಾಲು ಸರ್ವರಿಗೂ ಬಾಳು ಎಂಬ ನ್ಯಾಯ ಒದಗಿಸಲಾಗುತ್ತಿದೆ. ಬಿಡದಿ ಹೋಬಳಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಅಂತರಾಷ್ಟç ಮಟ್ಟದ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ರೂಪಿಸಲಾಗಿದೆ, ಉದ್ಯೋಗವನ್ನು ಸೃಷ್ಠಿಸಲು, ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ನರೇಗ ಕಾರ್ಯಕ್ರಮಗಳಲ್ಲಿ ಹೆಚ್ಚು ಅನುದಾನ ಉಪಯೋಗವಾಗುತ್ತಿದೆ. ಮೆಟ್ರೋವನ್ನು ಡಬಲ್ ಡೆಕ್ಕರ್ ಮಾಡಲು ಡಿಪಿಆರ್ ತಯಾರಿಸುವಂತೆ ಸೂಚಿಸಲಾಗಿದೆ ಎಂದರು.

ಸಾರಿಗೆ, ಮುಜರಾಯಿ ಇಲಾಖೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ಅವರು ಮಾತನಾಡಿ, ಬಹಳ ವರ್ಷಗಳಿಂದ ಆಗಬೇಕಿದ್ದ ಮಾಗಡಿ ಕೋಟೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಲ್ಲಿನ ಪತ್ರಕರ್ತರಿಗೆ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗ ನೀಡಲಾಗಿದೆ. ಸುಮಾರು 2 ಕೋಟಿ ರೂಪಾಯಿಗಳ ನೆರವನ್ನು ಸಹ ನೀಡಲಾಗುತ್ತಿದೆ, ತಾಲ್ಲೂಕಿನ ಜನರಿಗೆ ಬಹಳ ವರ್ಷಗಳಿಂದ ಬೇಡಿಕೆಯಿದ್ದ ತಾಲ್ಲೂಕು ಆಸ್ಪತ್ರೆಯನ್ನು ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ, ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಕೆಂಪೇಗೌಡರು ಬೆಂಗಳೂರಿನ ಸುತ್ತಮುತ್ತ ಉತ್ತಮ ಆಳ್ವಿಕೆ ನಡೆಸಿದ್ದಾರೆ. ಅವರ ಆಳ್ವಿಕೆಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ, ಅವರ ಈ ಖ್ಯಾತಿಯ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಿಲ್ಲಿ ಸಾಕಷ್ಟು ಬಡಾವಣೆಗಳಿವೆ, ಕೆಂಪೇಗೌಡ ಏರ್‌ಪೋರ್ಟ್, ಕೆಂಪೇಗೌಡ ಬಸ್‌ನಿಲ್ದಾಣಗಳಾಗಿದೆ. ಅಲ್ಲದೇ ಕೆಂಪೇಗೌಡರ ಸಾಕಷ್ಟು ಪ್ರತಿಮೆಗಳಿವೆ. ಅವರ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಪ್ರಾರಂಭವಾಗಿದೆ. ಇದಕ್ಕೆಲ್ಲಾ ಕಾರಣ ಅವರು ಕೊಟ್ಟ ಉತ್ತಮ ಆಡಳಿತವಾಗಿದೆ ಎಂದರು.

ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾದ ಮೇಲೆ ವಿಶೇಷ ಆಸಕ್ತಿ ವಹಿಸಿ ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ಮಾಡಿದ್ದಾರೆ. ಅವರ ಹೆಸರು ಉಳಿಯಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದರ ಅಂಗವಾಗಿ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಮಾಗಡಿಯ ಕೆಂಪೇಗೌಡರ ಕೋಟೆ ಅಭಿವೃದ್ಧಿ ಮಾಡಲಾಗುತ್ತಿದೆ, ಸಾರಿಗೆ ಇಲಾಖೆಯಿಂದ ಬಸ್ ಡಿಪೋ ಹಾಗೂ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು, ಮಾತ್ರವಲ್ಲ, ಈ ಭಾಗಕ್ಕೆ  ಹೊಸ ಬಸ್‌ಗಳನ್ನು ಹಾಕಲಾಗುವುದು ಎಂದವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಕಳೆದ ಬಾರಿ ಮಾಗಡಿ ತಾಲ್ಲೂಕಿನಲ್ಲಿ ಸುಮಾರು 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಸ್ಪತ್ರೆಯ ಕಾಮಗಾರಿಗಳನ್ನು ಪ್ರಾರಂಭಿಸಲಾಗಿತ್ತು. ಆ ಸಂದರ್ಭದಲ್ಲಿ ಮಾಗಡಿ ತಾಲ್ಲೂಕು ಆಸ್ಪತ್ರೆಯ ದುರಸ್ಥಿ ಕಾಮಗಾರಿಗೆ ಸುಮಾರು 4 ಕೋಟಿ ರೂ.ಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ದುರಸ್ಥಿಗೆ ಸುಮಾರು 4 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ಥಿಗೊಳಿಸಲು ಶಂಕುಸ್ಥಾಪನೆ ಮಾಡಲಾಗಿತ್ತು. ಸುಮಾರು 50 ವರ್ಷಗಳ ಹಿಂದಿನ ಆಸ್ಪತ್ರೆಯ ಕಟ್ಟಡವಾಗಿದ್ದು, ಅದು ಯೋಜಿತ ರೀತಿಯಲ್ಲಿ ಇಲ್ಲ, ಅಂದು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದೆ, ಆ ಭರವಸೆಯಂತೆ ಇಂದು ತಾಲ್ಲೂಕಿಗೆ ಹೊಸ ಆಸ್ಪತ್ರೆ ನೀಡುವ ಮೂಲಕ ಅದನ್ನ ಈಡೇರಿಸಲಾಗಿದೆ ಎಂದರು.

ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ದುಬಾರಿಯಾಗುತ್ತದೆ, ಅನೇಕ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾದಾಗ ಅವರ ಖರ್ಚು ವೆಚ್ಚಗಳು ಜಾಸ್ತಿಯಾಗುತ್ತದೆ. ಆ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರು ಬಡವರಾಗುತ್ತಾರೆ. ಅದಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಬಹಳ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಹಾಗೂ ಹೆಚ್ಚು ಸೇವೆಗಳನ್ನು ಒದಗಿಸಲು ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗುತ್ತಿದೆ, ಅದಕ್ಕಾಗಿ ನೆಲಮಂಗಲ, ಆನೇಕಲ್ ಹಾಗೂ ಮಾಗಡಿ ತಾಲ್ಲೂಕಿನಲ್ಲಿ 100 ಬೆಡ್‌ಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದವರು ಹೇಳಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಎಂ.ಆರ್.ಐ. ಸ್ಕ್ಯಾನಿಂಗ್ ಮಿಷನ್ ನೀಡಲಾಗುವುದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಸೇವೆ ನೀಡಲು ಇಬ್ಬರು  ನೇಮಕ ಮಾಡುವ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ. ಒಂದೆಡೆ ಸಂಪನ್ಮೂಲ ಇನ್ನೊಂದೆಡೆ ಆದ್ಯತೆಯನುಸಾರ ಕೆಲಸಗಳನ್ನು ಮಾಡಲಾಗುವುದು. ಹಲವು ಕೆಲಸಗಳು ಸರ್ಕಾರದಿಂದ ಆಗುತ್ತಿದೆ. ಗ್ಯಾರಂಟಿಯೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಸಹ ಮಾಡಲಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲಾಗುವುದು. ತಲಾ ಆದಾಯ ಇಡೀ ರಾಷ್ಟçಕ್ಕೆ ನಂಬರ್ ಒನ್ ರಾಜ್ಯ ಕರ್ನಾಟಕ. ಜಿಎಸ್‌ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆರ್ಥಿಕ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಎಂದರು.

ಒಳಮೀಸಲಾತಿಯನ್ನು ವೈಜ್ಞಾನಿಕವಾಗಿ ಏಳು ದಶಕದ ಸಮಸ್ಯೆ ಇತ್ಯರ್ಥ ಮಾಡಲಾಗಿದೆ. ಎಲ್ಲರನ್ನು ಜೋಡಿಸಿಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಈ ಅವಧಿಯಲ್ಲೇ ಮಾಗಡಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲು ಹಾಗೂ ಕುದೂರು ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ ಹಾಗೂ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ. ರೇವಣ್ಣ ಅವರು ಮಾತನಾಡಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಬೆಂಗಳೂರು ದಕ್ಷಿಣ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಟರಾಜು ಗಾಣಕಲ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆಂಚೇಗೌಡ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಣ್ಣ (ಕಲ್ಕೆರೆ) ಮಾಗಡಿ ಪುರಸಭೆ ಅಧ್ಯಕ್ಷರಾದ ರಮ್ಯ ನರಸಿಂಹಮೂರ್ತಿ, ಉಪಾಧ್ಯಕ್ಷರಾದ ರಿಯಾಜ್ ಅಹಮದ್ ಖಾನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ವಿವರ: ಮಾಗಡಿ ಪಟ್ಟಣದ ಐತಿಹಾಸಿಕ ಕೆಂಪೇಗೌಡರ ಕೋಟೆಯ ಜೀರ್ಣೋದ್ದಾರ ಕಾಮಗಾರಿ, ಮಾಗಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ಮಾಗಡಿ ಪಟ್ಟಣದ ಗೌರಮ್ಮನ ಕೆರೆಯ ಸೌಂದರೀಕರಣ ಮತ್ತು ಇತರೆ ಅಭಿವೃದ್ಧಿ ಕಾಮಗಾರಿ, ಮಾಗಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಡೂಮ್ ಲೈಟ್ ಸರ್ಕಲ್ ಮಾರ್ಗವಾಗಿ ಕೆಂಪೇಗೌಡ ಸರ್ಕಲ್ ವರೆಗೆ ರಸ್ತೆಯ ಪಾದಚಾರಿ ಮಾರ್ಗಗಳ ನವೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ, ಮಾಗಡಿ ಪಟ್ಟಣದ ಎನ್.ಇ.ಎಸ್ ವೃತ್ತದ ಅಭಿವೃದ್ಧಿ ಕಾಮಗಾರಿ, ಮಾಗಡಿ ತಾಲ್ಲೂಕು ಪತ್ರಕರ್ತರ ಭವನದ ಶಂಕುಸ್ಥಾಪನೆ ಕಾಮಗಾರಿ, 94-ಡಿ ಹಕ್ಕುಪತ್ರಗಳ ವಿತರಣೆ (500 ಜನರಿಗೆ), ಮಾಗಡಿ ತಾಲ್ಲೂಕು ಪಂಚಾಯಿತಿಯ ಗ್ರಾಮ ಪಂಚಾಯಿತಿಗಳ ವತಿಯಿಂದ ಇ-ಸ್ವತ್ತು ವಿತರಣೆ ಕಾರ್ಯಕ್ರಮ ಹಾಗೂ ಕೊರೊನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಾಧಕಿಯರಿಗೆ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular