ನವದೆಹಲಿ : ಬಹುನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ ಕರ್ನಾಟಕ ಹಾಗೂ ತಮಿಳುನಾಡಿನ ವ್ಯಾಜ್ಯ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೀಗ ಮಹತ್ವದ ಅಪ್ಡೇಟ್ ಸಿಕ್ಕಿದೆ.
ಸುಪ್ರೀಂನಲ್ಲಿ ವಾದ ಪ್ರತಿವಾದ ಮಂಡನೆಯಾಗಿದ್ದು, 2023-24ರ ಲೆಕ್ಕಾಚಾರದ ಪ್ರಕಾರ, ಯೋಜನಾ ವೆಚ್ಚವು ₹14,500 ಕೋಟಿಗೆ ಏರಿದೆ. ಹೀಗಾಗಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದಾರೆ. ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರವು 2019ರಲ್ಲಿ ವಿಸ್ಕೃತ ಯೋಜನಾ ವರದಿ ಸಲ್ಲಿಸಿತ್ತು. ಯೋಜನೆಗೆ ₹9,000 ಕೋಟಿ ವೆಚ್ಚ ಆಗಲಿದೆ ಎಂದು ತಿಳಿಸಿತ್ತು. ಹೆಚ್ಚುವರಿ ಅಡ್ವಕೇಟ್ ಜನರಲ್ ನಿಶಾಂತ್ ಪಾಟೀಲ ಮನವಿಯ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಪೀಠವು ಕರ್ನಾಟಕದ ಅರ್ಜಿಯನ್ನು ಪರಿಗಣಿಸಲು ನಿರ್ಧರಿಸಿದೆ.
ಯೋಜನೆ ಬಗ್ಗೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ 2023ರ ಸೆಪ್ಟೆಂಬರ್ 21ರಂದು ನಡೆದಿತ್ತು. ವಿಚಾರಣೆಯನ್ನು ಎರಡು ವಾರ ಮುಂದೂಡಿತ್ತು. ಆ ಬಳಿಕ ಪ್ರಕರಣ ವಿಚಾರಣೆಗೆ ಬಂದಿಲ್ಲ ಎಂದು ಪಾಟೀಲ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ನ್ಯಾಯಪೀಠ ಅರ್ಜಿ ವಿಚಾರಣೆ ಪರಿಗಣನೆ ನಿರ್ಧಾರ ಕೈಗೊಂಡಿದೆ.
ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಈ ಯೋಜನೆಯ ಅನುಷ್ಠಾನ ತುರ್ತು ಅಗತ್ಯ ಎಂದು ರಾಜ್ಯ ಸರ್ಕಾರದ ಪರ ವಕೀಲರು ಪ್ರತಿಪಾದಿಸಿದ್ದಾರೆ.
ಇನ್ನು, ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು 4.75 ಟಿಎಂಸಿ ಅಡಿ ನೀರನ್ನು ಸುಪ್ರೀಂ ಕೋರ್ಟ್ ಹಂಚಿಕೆ ಮಾಡಿದೆ. ಈ ನೀರನ್ನು ಬಳಸಲು ಈ ಯೋಜನೆ ಅನಿವಾರ್ಯ. ಜತೆಗೆ, ಮೇಕೆದಾಟು ಯೋಜನೆಯ ಮೂಲಕ ವಾರ್ಷಿಕವಾಗಿ 400 ಮೆಗಾವಾಟ್ ಜಲವಿದ್ಯುತ್ ಉತ್ಪಾದಿಸಲು ಯೋಜಿಸಲಾಗಿದೆ ಎಂದು ವಕೀಲರು ಗಮನಕ್ಕೆ ತಂದಿದ್ದಾರೆ. ಇದೇ ವಿಚಾರಕ್ಕೆ ತಮಿಳುನಾಡು ಅನೇಕ ಕ್ಯಾತೆಗಳನ್ನು ತೆಗೆದಿದ್ದು ಮೇಲಿಂದ ಮೇಲೆ ಸಾಕಷ್ಟು ತಕರಾರು ಅರ್ಜಿಗಳನ್ನು ಹಾಕಿ ಮೊಂಡುತನ ಮೆರೆದಿದೆ.
ಇನ್ನು,ಮೇಕೆದಾಟು ಯೋಜನೆಯ ಅಧ್ಯಯನದಲ್ಲಿ ಅಗತ್ಯ ನಿಯಮಗಳನ್ನು ಕೇಂದ್ರ ಪರಿಸರ ಸಚಿವಾಲಯ ರೂಪಿಸದ ಹಿನ್ನೆಲೆಯಲ್ಲಿ ಯೋಜನೆ ವಿಳಂಬವಾಗುತ್ತಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ ಸ್ವಾಧೀನಕ್ಕೆ ಅನುಮತಿ ಕೋರಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ರಾಜ್ಯದ ಜಲ ಸಂಪನ್ಮೂಲ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಕೇಂದ್ರ ಜಲ ಮಂಡಳಿಯು ತನ್ನ ಕಾರ್ಯಕಲಾಪಗಳ ಯಿಂದ ಮೇಕೆದಾಟು ಚರ್ಚೆಯನ್ನು ಕೈಬಿಟ್ಟಿದೆ.
ಕೇಂದ್ರ ಜಲ ಮಂಡಳಿಯು ತನ್ನ ಕಾರ್ಯಕಲಾಪದಿಂದಾಗಿ ಈವರೆಗೆ ಮೇಕೆದಾಟು ಯೋಜನೆಗೆ ಅನುಮತಿ ಸಿಕ್ಕಿಲ್ಲ, ಇದರಿಂದಾಗಿ ಯೋಜನೆ ಪ್ರಗತಿ ಕಾಣದೆ ಅಲ್ಲೇ ಸ್ಥಗಿತವಾಗಿದೆ. ಇದರಿಂದ ರಾಜ್ಯ ಜಲ ಸಂಪನ್ಮೂಲ ಅಧಿಕಾರಿಗಳಿಗೆ ತೀವ್ರ ಬೇಸರ ಉಂಟಾಗಿದೆ.
ಇನ್ನು ಯೋಜನೆಯಿಂದ ಮುಳುಗಡೆಯಾಗಬಹುದಾದ ಅರಣ್ಯ ಭೂಮಿಗೆ ಪರ್ಯಯ ಭೂಮಿಯನ್ನು ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಗುರುತಿಸಲಾಗಿದ್ದು, ಸದ್ಯದಲ್ಲೇ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ.
ಮೇಕೆದಾಟು ಯೋಜನೆಗಾಗಿ ಕಾವೇರಿ ಅಭಯಾರಣ್ಯ, ಸಂರಕ್ಷಿತಾರಣ್ಯದ ಸುಮಾರು 5,096.22 ಹೆಕ್ಟೇರ್ ಅರಣ್ಯ ಭೂಮಿಯ ಅವಶ್ಯಕತೆ ಇದ್ದು, ಈ ಅರಣ್ಯ ಭೂಮಿಗೆ ಬದಲಾಗಿ 7,404.62 ಹೆಕ್ಟೇರ್ ಸಿ ಅಂಡ್ ಡಿ ಭೂಮಿ ಹಾಗೂ ಡೀಮ್ಡ್ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ.