ಶಿವಮೊಗ್ಗ : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ನಿರಂತರವಾಗಿ ಸುರಿದ ಬಾರೀ ಮಳೆಯಿಂದಾಗಿ ಸುಮಾರು 45000 ಹೆಕ್ಟೇರ್ ಪ್ರದೇಶ ಅಡಿಕೆಬೆಳೆ ಕೊಳೆರೋಗಕ್ಕೆ ತುತ್ತಾಗಿದೆ ಅಲ್ಲದೇ ಸಹಸ್ರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯು ಹಾನಿಗೊಳಗಾಗಿದ್ದು, ಬೆಳೆನಷ್ಟದ ಪ್ರಮಾಣವನ್ನು ತ್ವರಿತವಾಗಿ ಒದಗಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬೆಳೆಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಂಭವವಿರುವ ಬಗ್ಗೆಯೂ ಮಾಹಿತಿ ಇದೆ. ಈಗಾಗಲೇ ಆಗಿರುವ ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಅಲ್ಲದೇ ಸಂಭಾವ್ಯ ಬೆಳೆಹಾನಿಯನ್ನು ತಡೆಗಟ್ಟಲು ಇರುವ ಕ್ರಮಗಳ ಬಗ್ಗೆಯೂ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ ಎಂದರು.
ಬೆಳೆಹಾನಿಗೊಳಗಾಗಿರುವ ರೈತರಿಗೆ ಸಮಾಧಾನ ತರುವ ರೀತಿಯಲ್ಲಿ ಕೇಂದ್ರ ಸರ್ಕಾರವು ಪರಿಹಾರದ ಮೊತ್ತ ಘೋಷಿಸಬೇಕು. ಈಗಾಗಲೇ ಘೋಷಿಸಿರುವ ಮೊತ್ತ ಅತ್ಯಲ್ಪವಾಗಿದೆ. ಪರಿಹಾರಧನ ವಿತರಿಸುವ ವಿಷಯದಲ್ಲಿ ತಾರತಮ್ಯ ಧೋರಣೆ ಸರಿಯಲ್ಲ ಎಂದ ಅವರು, ತೆಂಗು ಅಭಿವೃಧ್ಧಿ ಮಂಡಳಿಯ ಶಾಖೆಯನ್ನು ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆಯೂ ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಹಾನಿಗೊಳಗಾಗಿರುವ ನಗರ ಮತ್ತು ಪಟ್ಟಣ ಪ್ರದೇಶಗಳ ರಸ್ತೆಯನ್ನು ದುರಸ್ತಿಗೊಳಿಸಲು ಉದ್ದೇಶಿಸಲಾಗಿದೆ. ಪ್ರಗತಿಪಥ ಯೋಜನೆಯಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಟ 50ಕಿ.ಮೀ. ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು 50ಕೋಟಿ ರೂ.ಗಳ ಅನುದಾನ ಸರ್ಕಾರವು ಬಿಡುಗಡೆ ಮಾಡಲಿದೆ. ಅಲ್ಲದೇ ಜಿಲ್ಲೆಯ ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಡುವುದರಿಂದ ಹೆಚ್ಚು ಪ್ರಮಾಣದ ರಸ್ತೆಗಳು ಹಾಳಾಗಿದ್ದು, ದುರಸ್ತಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಮಾನ್ಯಮುಖ್ಯಮಂತ್ರಿಗಳಲ್ಲಿ ಕೋರಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ನೂತನವಾಗಿ ಆರಂಭಿಸಲು ಉದ್ದೇಶಿಸಲಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳ ಸಂಖ್ಯೆಯನ್ನು 500 ರಿಂದ 800ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯ ಶಾಲೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಸರ್ಕಾರ ಈಗಾಗಲೇ 3000 ಕೋ.ರೂ.ಗಳನ್ನು ವೆಚ್ಚ ಮಾಡಲಿದೆ. ಅಲ್ಲದೇ ಅಂತಹ ಆಯ್ದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರೇತರ ಸಂಸ್ಥೆಗಳಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳಲಾಗುವುದು. ಈಗಾಗಲೇ ಅನೇಕ ಸರ್ಕಾರೇತರ ಸಂಸ್ಥೆಗಳು ಆಸಕ್ತಿ ತೋರಿವೆ ಎಂದವರು ನುಡಿದರು.
ರಸ್ತೆ, ಕಟ್ಟಡ, ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರದ ವತಿಯಿಂದ ಸಹಸ್ರಾರು ಕೋಟಿ ರೂ.ಗಳ ಮಂಜೂರು ಮಾಡಲಾಗಿದ್ದು, ಆ ಎಲ್ಲಾ ಕಾಮಗಾರಿಗಳ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಶೀಘ್ರವೇ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣದ ಕೊರತೆಯನ್ನು ಹೋಗಲಾಡಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ತಕ್ಷಣದ ಕ್ರಮವಾಗಿ 13000ಶಿಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲದೇ ಶೀಘ್ರದಲ್ಲಿ 18500 ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಸರ್ವರಲ್ಲೂ ಸಮಾನತೆ ಕಾಣುವ ಹಿನ್ನೆಲೆಯಲ್ಲಿ ಕೈಗೊಳ್ಳಲಿರುವ ಜಾತಿಗಣತಿಯನ್ನು ಅಕ್ಟೋಬರ್ ಮಾಸಾಂತ್ಯದೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮಕ್ಕಳ ಕಲಿಕೆಗೆ ಅಡಚಣೆಯಾಗದಂತೆ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ನೆರೆಯ 26 ತಾಲೂಕುಗಳ ವ್ಯಾಪ್ತಿಯ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿರುವುದನ್ನು ಗಮನಿಸಲಾಗಿದೆ. ಮುಂದಿನ 10-15 ದಿನಗಳಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಅಲ್ಲದೇ ಕೊರತೆ ಇರುವ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಶ್ ಬಾನು, ಆರ್.ಪ್ರಸನ್ನಕುಮಾರ್, ಶ್ರೀನಿವಾಸ ಕರಿಯಣ್ಣ, ಕಲಗೋಡು ರತ್ನಾಕರ, ಕಲೀಂವುಲ್ಲಾ, ದೇವಿಕುಮಾರ್, ರಮೇಶ್, ಶೇಷಾದ್ರಿ, ರಮೇಶ್ಹೆಗ್ಡೆ, ಶರತ್ ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.