ಬೆಂಗಳೂರು: “ಮಂಜುನಾಥ ಸ್ವಾಮಿ ಯಾರೊಬ್ಬರಿಗೂ ಸೇರಿದವಲ್ಲ, ಎಲ್ಲರಿಗೂ ಸೇರಿರುವ ದೇವರು. ಯಾರು ಬೇಕಾದರೂ ಧರ್ಮಸ್ಥಳಕ್ಕೆ ಹೋಗಿ ದರ್ಶನ ಮಾಡಬಹುದು” ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಆದರೆ ಇತ್ತೀಚಿನ ಕೆಲವು ಪ್ರಕರಣಗಳ ನಂತರ ಧರ್ಮಸ್ಥಳಕ್ಕೆ ತೆರಳುತ್ತಿರುವ ಕಾಂಗ್ರೆಸ್ ಶಾಸಕರ ಬಗ್ಗೆ ತೀವ್ರವಾಗಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಧರ್ಮಸ್ಥಳ ಚಲೋ” ಅಭಿಯಾನವನ್ನು ಕೈಗೊಂಡಿರುವ ಕಾಂಗ್ರೆಸ್ ಶಾಸಕರ ಯಾತ್ರೆ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಅನುಮಾನಗಳು ಮೂಡಿವೆ. “ಈ ಹಿಂದೆ ಯಾಕೆ ಹೋಗಲಿಲ್ಲ? ಈಗಲೇ ಯಾಕೆ? ಮಂಜುನಾಥನ ದರ್ಶನ ಯಾರಿಗೂ ನಿರ್ಬಂಧವಿಲ್ಲ, ಆದರೆ ಇತ್ತೀಚಿನ ಪ್ರಕರಣಗಳ ನಂತರ ತಕ್ಷಣ ಯಾಕೆ ಧರ್ಮಸ್ಥಳ ಪ್ರವಾಸ?” ಎಂದು ಪ್ರಶ್ನಿಸಿದರು.
“ಧರ್ಮಸ್ಥಳಕ್ಕೆ ಕಳಂಕ ತಟ್ಟಿದೆ ಅಂತಾ ಹೋಗ್ತಿದ್ರೋ ಅಥವಾ ತಮ್ಮ ರಾಜಕೀಯ ಕಳಂಕ ತೊಳೆದಿಕೊಳ್ಳಲು ಹೋಗ್ತಿದ್ರೋ ಗೊತ್ತಿಲ್ಲ. ದೇವರ ಮುಂದೆ ಏನು ಕೇಳಿದ್ದಾರೆ ಎಂಬುದೂ ಗೊತ್ತಿಲ್ಲ” ಎಂದು ಟಾಂಗ್ ನೀಡಿದರು.
ಸೌಜನ್ಯ ಪ್ರಕರಣ ಮತ್ತು ಎಸ್‌ಐಟಿ ತನಿಖೆ
ಸೌಜನ್ಯ ಪ್ರಕರಣದ ಮರು ತನಿಖೆ ಕುರಿತ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು, “ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಈ ಪ್ರಕರಣದ ಉಲ್ಲೇಖವಿಲ್ಲ. ಆದರೂ ಎಸ್‌ಐಟಿ ಏನು ಆಧಾರದ ಮೇಲೆ ತನಿಖೆ ನಡೆಸುತ್ತಿದೆ ಎಂಬುದು ಸ್ಪಷ್ಟವಿಲ್ಲ. ಯಾರಿಂದಲಾದರೂ ಲಿಂಕ್ ಸಿಕ್ಕಿರಬಹುದು. ಅದನ್ನು ಪರಿಶೀಲಿಸಬೇಕು. ಇದು ಮರು ತನಿಖೆ ಎಂದು ನಾನು ಹೇಳುವುದಿಲ್ಲ, ಆದರೆ ತನಿಖೆಗಾಗಿ ಬಂದಿರುವ ಹೊಸ ಮಾಹಿತಿಯ ಆಧಾರದ ಮೇಲೆ ಕ್ರಮವಹಿಸಲಾಗುತ್ತದೆ” ಎಂದರು.
ಎನ್‌ಐಎ ತನಿಖೆ ಕುರಿತು ಸ್ಪಷ್ಟನೆ
ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅಮಿತ್ ಶಾಗೆ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಎನ್‌ಐಎ ತನಿಖೆ ಬೇಕು ಅಂತಾರೆ, ಆದ್ರೆ ತನಿಖೆ ಅನ್ಯಾಯವಾಗುತ್ತಿದೆ ಎಂದೇ ಮೊದಲಿನಿಂದಲೇ ಆರೋಪಿಸುತ್ತಿದ್ದರು. ವಿದೇಶಿ ಹಣದ ವಿಚಾರವಿದ್ದರೆ ಕೇಂದ್ರ ನೋಡಬಹುದು. ಆದರೆ ಹೆಣ ಹೂಳುವಂತಹ ಆರೋಪಗಳಿಗೆ ಎಸ್‌ಐಟಿ ತನಿಖೆವೇ ಸೂಕ್ತ. ಎನ್‌ಐಎ ತನಿಖೆಗೆ ಜಸ್ಟಿಫಿಕೇಷನ್ ಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಾಗದು” ಎಂದು ಹೇಳಿದರು.