ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ
ಬೆಳಗಾವಿ: ನಗರದ ಕುವೆಂಪು ನಗರದಲ್ಲಿರುವ ಕೆಎಲ್‌ಇ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹತ್ತಿರದ ಸಾರ್ವಜನಿಕ ಗಾರ್ಡನ್ನಲ್ಲಿ ಮಳಿಗೆ ಕಟ್ಟಡಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಅನುಮತಿ ನೀಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಬಳಕೆಗೆ ಕಾಯ್ದಿರಿಸಿದ ಗಾರ್ಡನ್‌ಗಳಲ್ಲಿ ಈ ರೀತಿಯ ಮಳಿಗೆ ನಿರ್ಮಾಣ ಮುಂದುವರಿದರೆ, ಭವಿಷ್ಯದಲ್ಲಿ ಗಾರ್ಡನ್ ಸೌಲಭ್ಯವೇ ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. “ಇವತ್ತು ಒಬ್ಬರು. ನಾಳೆ ಮತ್ತೊಬ್ಬರು ಹೀಗೆ ಕಟ್ಟಡ ನಿರ್ಮಾಣ ಮಾಡಿದರೆ ಗಾರ್ಡನ್‌ಗಳ ಅಸ್ತಿತ್ವವೇ ಉಳಿಯುವುದಿಲ್ಲ” ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಇದೇ ಮಳಿಗೆ ನಿರ್ಮಾಣದ ವೇಳೆ ಪರಿಸರವೂ ಹಾನಿಗೊಳಗಾಗಿದೆ. ಜಾಗದ ಹತ್ತಿರವಿದ್ದ ದೊಡ್ಡ ಗಾತ್ರದ ಮರ ಹಾಗೂ ಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಕಾರಿ ಅಭಿಯಂತರರು (ಉತ್ತರ ಉಪವಿಭಾಗ-1) ನೀಡಿರುವ ವರದಿ ಪತ್ರವು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಆ ಪತ್ರದಲ್ಲಿ ಕೆಳಗಿನಂತೆ ಉಲ್ಲೇಖಿಸಲಾಗಿದೆ: ಬೆಳಗಾವಿ ಮಹಾನಗರ ಪಾಲಿಕೆ ವರದಿ
(: 10-04-2023) ಕೆ.ಎಲ್.ಇ ಅಂತರಾಷ್ಟ್ರೀಯ ಶಾಲೆ, ಕುವೆಂಪು ನಗರ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಶ್ರೀಮತಿ ಗೀತಾ ನಾಗೇಶ ಕುದರಿ ಅವರಿಗೆ 12×12 ಗಾತ್ರದ ಮಿಲ್ಕ್ ಬೂತ್ ತೆರೆಯಲು ಉಪ ಆಯುಕ್ತರು (ಕಂದಾಯ) ಸೂಚಿಸಿದಂತೆ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ ಉದ್ಯಾನವನ ಜಾಗವಿದ್ದು, ಬೆಳಗಾವಿ ನಗರ ವಲಯ ನಿಯಮಾವಳಿ ಅನುಬಂಧ-I ಪ್ರಕಾರ ಆಟದ ಮೈದಾನ, ಬಯಲು ಪ್ರದೇಶ, ಉದ್ಯಾನವನಗಳು ಕ್ಯಾಂಟೀನ್, ಹಾಲಿನ ಬೂತ್, ಹಾಪ್‌ಕಾಮ್ ಸೆಂಟರ್ ಎಂದು ಕಂಡುಬಂದಿದ್ದು, ವರದಿ ಸಲ್ಲಿಸಲಾಗಿದೆ.. ಈ ವರದಿಯ ಆಧಾರದಲ್ಲಿ ಮಹಾ ನಗರ ಪಾಲಿಕೆ ಗಾರ್ಡನ್‌ನಲ್ಲಿ ಮಿಲ್ಕ್ ಬೂತ್ ಗೆ ಅನುಮತಿ ನೀಡಿರು ವುದು ಸ್ಪಷ್ಟವಾಗಿದೆ. ಆದರೆ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಗುರಿಯಾಗಿದೆ. “ಉದ್ಯಾನ ವನಗಳು ಜನರ ಉಸಿರಾಟಕ್ಕೆ ಅಗತ್ಯವಾದ ಹಸಿರು ಪ್ರದೇಶ, ಇಲ್ಲಿ ಮಳಿಗೆಗೆ ಅವಕಾಶ ನೀಡುವುದು ತಪ್ಪು” ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಒತ್ತಡಕ್ಕೊಳಗಾಗದೆ, ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವಂತೆ ಪಾಲಿಕೆ ಆಯುಕ್ತರು ತಕ್ಷಣ ಕ್ರಮ ಕೈಗೊಳ್ಳಬೇಕು.