ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ : ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ರಾಗಿ ಬೆಳೆದ ಪ್ರತಿಯೊಬ್ಬ ರೈತರ ಖಾತೆಗೆ ಸರಿಯಾಗಿ ಹಣ ಜಮಾವಾಗುವಂತೆ ಕ್ರಮವಹಿಸಿ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ರಾಗಿ ಬೆಳೆದಿರುವ ರೈತರ ಜಮೀನುಗಳನ್ನು ಸರ್ವೆ ಮಾಡಿ ನಿಜವಾದ ರೈತನಿಗೆ ಸರ್ಕಾರದ ಸೌಲಭ್ಯಗಳು ದೊರಕುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಪುರುಷರಿಗೆ ಬಸ್ಸುಗಳಲ್ಲಿ ಸೀಟು ಸಿಗದೆ ಇರುವ ಬಗೆ ಬಸ್ಸುಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಎಂದು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದು , ಇದರ ಬಗ್ಗೆ ಚರ್ಚಿಸಿ 60: 40 ರ ಅನುಪಾತದಲ್ಲಿ ಆಸನದ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.
ತಾಲೂಕಿನ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂಬoಧ 21ಹಾಡಿಗಳಲ್ಲಿ ಕೆಲಸ ಆರಂಭಿಸಿದ್ದು ಕೆಲಕಡೆಗಳಲ್ಲಿ ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಇದು ಸರಿಯಲ್ಲ ಹಾಡಿಜನರಿಗೆ ಮೂಲಸೌಕರ್ಯ ಕಲ್ಪಿಸುವ ಸರಕಾರದ ನಡೆಗೆ ಸಹಕಾರಿಯಾಗಿ ವರ್ತಿಸಬೇಕು, ಸೌಲಭ್ಯಗಳಿಂದ ವಂಚಿತರಾಗಿರುವ ಗಿರಿಜನರಿಗೆ ಸೌಲಭ್ಯ ಒದಗಿಸಲು ಎಲ್ಲಾ ಇಲಾಖೆಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಾಗರಹೊಳೆ ಬಫರ್ ಜೋನ್ ಅಡಿ ಬರುವ ಗ್ರಾಮಗಳು ಮತ್ತು ಒತ್ತುವರಿಯಾಗಿರುವ ಪ್ರದೇಶಗಳಲ್ಲಿ ಕರಡಿ ಬೊಕ್ಕೆ ಗ್ರಾಮದಲ್ಲಿ ಅನಧಿಕೃತ ಮನೆಗಳಿಗೆ ಅವುಗಳಿಗೆ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಡಿಸಿಎಫ್ ಫಯಾಜುದೀನ್ ಎಂ.ಡಿ. ಸಭೆಗೆ ತಿಳಿಸಿದರು. ಇದು ಒತ್ತುವರಿ ಪ್ರದೇಶ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ ಜಿಲ್ಲಾಧಿಕಾರಿಗ ಲಕ್ಷ್ಮಿಕಾಂತ ರೆಡ್ಡಿ ತಕ್ಷಣ ಈಗಾಗಲೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದು ಕ್ರಮವಹಿಸಿದೆ. ಈ ಕರಡಿಬೊಕ್ಕೆ ಹಾಡಿಯ ಬಗ್ಗೆ ಸಭೆ ಕರೆದು ಸಮಸ್ಯೆಯನ್ನು ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಿಸುವಂತೆ ಉಪವಿಭಾಗಾಧಿಕಾರಿ ವಿಜಯ್‌ಕುಮಾರ್ ಅವರಿಗೆ ತಿಳಿಸಿದರು.
ಇಇಗೆ ತರಾಟೆ
ಮಾಲಂಗಿ ಗೋಮಾಳದಲ್ಲಿ ಸೇತುವೆ ಕುಸಿದು 2 ವರ್ಷವಾದರೂ ಅದರ ಕಾಮಗಾರಿ ಆಗಿಲ್ಲ ಅಧಿಕಾರಕ್ಕೆ ಬಂದು ವರ್ಷ ಕಳೆದರು ಇಇ ತಾಲೂಕಿನ ಕೆಲಸಗಳ ಕಡೆ ಗಮನಕೊಡುತ್ತಿಲ್ಲ ಎಂದು ಲೊಕೋಪಯೋಗಿ ಇಇ ಮುತ್ತುರಾಜ್‌ಗೆ ಸಚಿವರು ತರಾಟೆಗೆ ತೆಗೆದುಕೊಂಡರು, ಎಲ್ಲಾ ಇಲಾಖೆ ಅಧಿಕಾರಿಗಳು ಬಂದು ಏನು ಕೆಲಸ ಆಗಬೇಕು ಎನ್ನುತ್ತಿದ್ದಾರೆ ನೀವು ಮಾತ್ರ ನಿರ್ಲಕ್ಷ ವಹಿಸುತ್ತಿದ್ದೀರಾ ಶೀಘ್ರದಲ್ಲಿ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ತಾಲ್ಲೂಕಿನಲ್ಲಿ ಪಿರಿಯಾಪಟ್ಟಣ ಮಸಣೀಕಮ್ಮ ದೇವಾಲಯದ 9 ಕೋಟಿ ಟೆಂಡರ್ ಎಸ್ಟೀಮೇಟ್ ಆಗುತ್ತಿದ್ದು ಭೂವರಹ ದೇವಾಲಯದವರಿಂದ ಎಸ್ಟಿಮೇಟ್ ಮಾಡಿದವರಿಂದ ಇದನ್ನು ಮಾಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಎಇಇ ವೆಂಕಟೇಶ್ ಸಭೆಗೆ ಮಾಹಿತಿ ನೀಡಿದರು.
700 ಮಂದಿಗೆ ನಿವೇಶನ
ತಾಲೂಕಿನಲ್ಲಿ 700 ಮಂದಿಗೆ ನಿವೇಶನ ರಹಿತರಿಗೆ ನೀವೇಶನ ನೀಡಲು ಗ್ರಾಮಠಾಣ ಜಾಗಗಳ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಇಒ ಸುನೀಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಮಾತನಾಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಸಮ್ಶಾನ ಅಭಿವೃದ್ದಿಗೆ ಡಿಜಿಕೊಪ್ಪಲು, ತಿಮಕಾಪುರ, ಮತ್ತು ಕೊತ್ತವಳ್ಳಿ ಕೊಪ್ಪಲು ಗ್ರಾಮಗಳಿಗೆ ಹಣ ಮಂಜೂರಾತಿ ಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ 108 ದೇವಾಲಯಗಳ ಅಭಿವೃದ್ದಿ ಕೆಲಸ ನಡೆಯುತ್ತಿದ್ದು ಶೇಕಡ 55ರಷ್ಟು ದೇವಾಲಯದ ಕೆಲಸಗಳು ಮುಗಿದಿವೆ. ವಿವೇಕ ಶಾಲೆಯ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಎಂದು ಜಿ.ಪಂ.ಎಇಇ ಮಂಜುನಾಥ್ ಸಭೆಗೆ ತಿಳಿಸಿದರು, ಅಭಿಕಾರಿ ನಿರೀಕ್ಷಕ ವೆಂಕಟೇಶ್ ಮಳೆ ಜಾಸ್ತಿ ಇರುವುದರಿಂದ ಮದ್ಯಮಾರಾಟ ನಿರೀಕ್ಷಿತ ಗುರಿತಲುಪಿಲ್ಲ, 58 ಲೀಟರ್ ಮದ್ಯ ವಶಪಡಿಸಿಕೊಂಡು ಒಂದು ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಅನೇಕ ಇಲಾಖೆಗಳು ಸಚಿವರು ಸೂಚನೆ ನೀಡಿದರು ಅದೇ ಸಮಸ್ಯೆಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ ಈ ಬಾಕಿ ಕಾಮಗಾರಿಗಳು ಮತ್ತು ಯೋಜನೆಗಳನ್ನು ಸಂಬoಧಿಸಿದ ಇಲಾಖೆಗಳು ಶೀಘ್ರದಲ್ಲಿ ಮುಗಿಸಿ ಮುಂದಿನ ಕೆಡಿಪಿ ಸಭೆಯಲ್ಲಿ ಪುನರಾವರ್ತನೆಗೊಳ್ಳದ ರೀತಿಯಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸಭೆಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ಕುಮಾರ್, ಉಪ ಕಾರ್ಯದರ್ಶಿ ಭೀಮಪ್ಪ, ಉಪವಿಭಾಗಾಧಿಕಾರಿ ವಿಜಯ್‌ಕುಮಾರ್, ಅಧಿಕಾರೇತರ ನಾಮನಿದೇಶಿತ ಸದಸ್ಯರಾದದ ನಿತಿನ್‌ವೆಂಕಟೇಶ್, ಲಕ್ಷಿö್ಮನಾರಾಯಣ್, ಶೇಖರ್, ಮಹದೇವ್, ಶಫೀಅಹಮದ್, ನಿರೂಪ, ತಹಸೀಲ್ದಾರ್ ನಿಸರ್ಗಪ್ರಿಯಾ, ಇಒ ಸುನೀಲ್‌ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.