ವರದಿ: ಸ್ಟೀಫನ್ ಜೇಮ್ಸ್, ಬೆಳಗಾವಿ
ಬೆಳಗಾವಿ : ಬೆಳಗಾವಿಯ ಟಿಳಕವಾಡಿಯ ಮಂಗಳವಾರಪೇಠ್‌ನಲ್ಲಿ ಭೀಕರ ಕೊಲೆ ಸಂಭವಿಸಿದೆ. ತಮ್ಮನ ಪತ್ನಿ ಗೀತಾ ಗವಳಿ (45) ಅವರನ್ನು ಆರೋಪಿ ಗಣೇಶ ಗವಳಿ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಗೀತಾ ಅವರನ್ನು ತಕ್ಷಣವೇ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಅಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಗೀತಾರ ಪತಿ ರಂಜಿತ್ ಗವಳಿ ಹಲವಾರು ವರ್ಷಗಳ ಹಿಂದೆ ನಿಧನರಾಗಿದ್ದರು. ಈತನ 40×12 ಅಳತಿಯ ಜಾಗದ ಆಸ್ತಿ ಹಂಚಿಕೆ ವಿಚಾರದಲ್ಲಿ ಗೀತಾ ಹಾಗೂ ಗಣೇಶ ನಡುವೆ ವಾದವಾಗುತ್ತಿತ್ತು. ಇಂದು ಬೆಳಗ್ಗೆ ಮಾತಿನ ಚಕಮಕಿ ಹತ್ಯೆಗೆ ಕಾರಣವಾಯಿತು.
ಆರೋಪಿ ಗಣೇಶ ಗವಳಿ ಟಿಳಕವಾಡಿ ಠಾಣೆಯ ರೌಡಿಶೀಟರ್ ಆಗಿದ್ದು, ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾಗಿರುವ ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ.